



ಡೈಲಿವಾರ್ತೆ:11/ಏಪ್ರಿಲ್ /2026

ಮೆಹಂದಿ ವೇದಿಕೆಯಲ್ಲಿ ದುರಂತ: ನಿರೂಪಕ ಅಶ್ವಥ್ ಹೃದಯಾಘಾತಕ್ಕೆ ಬಲಿ

ಬಂಟ್ವಾಳ: ಮೆಹಂದಿ ಕಾರ್ಯಕ್ರಮದ ಸಂಭ್ರಮ ಮಧ್ಯೆ ದಾರುಣ ಘಟನೆ ಸಂಭವಿಸಿ, ಯುವ ನಿರೂಪಕನೊಬ್ಬ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಫರಂಗಿಪೇಟೆ ಸಮೀಪದ ಅಬ್ಬೆಟ್ಟು ನಿವಾಸಿ ಅಶ್ವಥ್ (32) ಎಂದು ಗುರುತಿಸಲಾಗಿದೆ.
ನಾಯಿಲದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಮದರಂಗಿ (ಮೆಹಂದಿ) ಕಾರ್ಯಕ್ರಮವನ್ನು ಅಶ್ವಥ್ ನಿರೂಪಣೆ ಮಾಡುತ್ತಿದ್ದ ವೇಳೆ ಹಠಾತ್ ಅಸ್ವಸ್ಥಗೊಂಡು ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದವರು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಸಂಭ್ರಮದ ವಾತಾವರಣವನ್ನು ಕ್ಷಣಾರ್ಧದಲ್ಲಿ ಶೋಕದಲ್ಲಿ ಮುಳುಗಿಸಿದೆ.
ಕುಟುಂಬಸ್ಥರು ಹಾಗೂ ಬಂಧುಮಿತ್ರರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ