ಡೈಲಿವಾರ್ತೆ:19/ಏಪ್ರಿಲ್ /2026

ಉಳ್ಳಾಲದಲ್ಲಿ ದಾರುಣ ಘಟನೆ: ನಾಲೆಯ ಕೆಸರಿನಲ್ಲಿ ಮುಳುಗಿ 17 ವರ್ಷದ ಬಾಲಕ ದುರ್ಮರಣ

ಉಳ್ಳಾಲ, ಏ.19: ಬೇಸಿಗೆ ರಜೆಯಲ್ಲಿ ಸ್ನೇಹಿತರೊಂದಿಗೆ ನೀರಾಟವಾಡಲು ತೆರಳಿದ್ದ ಬಾಲಕನೊಬ್ಬ ನಾಲೆಯ ಕೆಸರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಅಂಬ್ಲಮೊಗರು ಗ್ರಾಮದ ಖಂಡಿಲದಲ್ಲಿ ನಡೆದಿದೆ.

ಮೃತ ಬಾಲಕನನ್ನು ಅಂಬ್ಲಮೊಗರು ಗ್ರಾಮದ ಜರಿ ಹೌಸ್ ನಿವಾಸಿ ಶಿವರಾಮ್ ಅವರ ಪುತ್ರ ಸೃಜನ್ (17) ಎಂದು ಗುರುತಿಸಲಾಗಿದೆ.

ಸೃಜನ್ ಪ್ರಥಮ ಪಿಯುಸಿ ಶಿಕ್ಷಣ ಮುಗಿಸಿಕೊಂಡಿದ್ದು, ರಜೆ ಹಿನ್ನೆಲೆ ಶನಿವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಖಂಡಿಲದಲ್ಲಿರುವ ಖಾಸಗಿ ಜಮೀನಿನ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದನು.
ನಂತರ ಕೈಕಾಲು ತೊಳೆಯಲು ಪಕ್ಕದ ನಾಲೆಗೆ ಒಬ್ಬನೇ ಇಳಿದಾಗ ಆತನ ಕಾಲುಗಳು ಕೆಸರಿನಲ್ಲಿ ಸಿಲುಕಿಕೊಂಡು ನಿಧಾನವಾಗಿ ಮುಳುಗಿದ್ದಾನೆ. ಸೃಜನ್‌ನನ್ನು ರಕ್ಷಿಸಲು ಮುಂದಾದ ಮತ್ತೋರ್ವ ಸ್ನೇಹಿತನಿಗೂ ಅಪಾಯ ಎದುರಾದ ಹಿನ್ನೆಲೆಯಲ್ಲಿ ಇತರರು ಅವನನ್ನು ಹೊರಗೆಳೆದಿದ್ದಾರೆ. ಘಟನೆಯಿಂದ ಬೆಚ್ಚಿಬಿದ್ದ ಬಾಲಕರು ವಿಚಾರವನ್ನು ತಕ್ಷಣ ಯಾರಿಗೂ ತಿಳಿಸದೆ ಮನೆಗಳಿಗೆ ತೆರಳಿರುವುದು ತಿಳಿದುಬಂದಿದೆ.

ರಾತ್ರಿ 8 ಗಂಟೆಯಾದರೂ ಸೃಜನ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಸ್ನೇಹಿತರಿಂದ ಘಟನೆಯ ವಿವರ ತಿಳಿದು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ಹಾಗೂ ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು.

ನಾಲೆಯಲ್ಲಿ ಭಾರೀ ಹೂಳು ತುಂಬಿಕೊಂಡಿದ್ದರಿಂದ ರಕ್ಷಣಾ ಕಾರ್ಯ ಕಷ್ಟಕರವಾಗಿತ್ತು. ನಿರ್ಜನ ಪ್ರದೇಶದಲ್ಲಿ ಬೆಳಕಿನ ಕೊರತೆಯ ನಡುವೆ ಟಿಪ್ಪರ್ ಲಾರಿಗಳ ಹೆಡ್‌ಲೈಟ್ ಸಹಾಯದಿಂದ ಮಧ್ಯರಾತ್ರಿ ವರೆಗೂ ಕಾರ್ಯಾಚರಣೆ ನಡೆಸಲಾಯಿತು. ಕೊನೆಗೆ ನುರಿತ ಕಾರ್ಮಿಕರ ಸಹಾಯದಿಂದ ಮಧ್ಯರಾತ್ರಿ ಸೃಜನ್ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಮೃತ ಸೃಜನ್‌ನ ತಂದೆ ರಿಕ್ಷಾ ಚಾಲಕರಾಗಿದ್ದು, ತಾಯಿ ಜಯಲಕ್ಷ್ಮಿ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ. ಕುಟುಂಬದಲ್ಲಿ ಸೃಜನ್ ಹಿರಿಯ ಮಗನಾಗಿದ್ದು, ಒಬ್ಬ ಸಹೋದರಿ ಇದ್ದಾಳೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.