



ಡೈಲಿವಾರ್ತೆ:19/ಏಪ್ರಿಲ್ /2026

ಅರಬೈಲ್ ಘಾಟ್ ಕಾರು ದಹನ ಪ್ರಕರಣ: ಅಪಘಾತವಲ್ಲ, ಯೋಜಿತ ಕೊಲೆ – ಮೂವರು ಆರೋಪಿಗಳ ಬಂಧನ

ಯಲ್ಲಾಪುರ, ಏಪ್ರಿಲ್ 19: ಕೆಲ ದಿನಗಳ ಹಿಂದೆ ಅರಬೈಲ್ ಘಾಟ್‌ನಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಶವ ಪತ್ತೆಯಾಗಿದ್ದ ಪ್ರಕರಣವು ಅಪಘಾತವಲ್ಲ, ಬದಲಾಗಿ ಪೂರ್ವಯೋಜಿತ ಕೊಲೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಸಂಬಂಧ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿ ಪ್ರಕರಣದ ನಿಗೂಢತೆಗೆ ತೆರೆ ಎಳೆದಿದ್ದಾರೆ.
ಬಂಧಿತರನ್ನು ಹಳೆ ಹುಬ್ಬಳ್ಳಿಯ ನಿವಾಸಿಗಳಾದ ಅಬ್ದುಲ್ ನಯೀಮ್ ಬಸೀರ್ ಅಹ್ಮದ್ ಮುಜಾವರ್, ಮೌಲಾ ಸಾಬ್ ಬಾಬಾ ಜಾನ್ ಬಾರ್ ಮತ್ತು ದಾದಾ ಪಿರ್ ಅಫ್ತಾಬ್ ಮೆಹಬೂಬ್ ಸಾಬ್ ಬಾಲ್ಸಂಗಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಏಪ್ರಿಲ್ 8ರಂದು ಬೆಳಗಾವಿ ನಿವಾಸಿ ನಿತೀಶ್ ದಾಪ್ಲೆ ಅವರನ್ನು ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆಗೈದು, ಶವವನ್ನು ಕಾರಿನಲ್ಲಿಟ್ಟುಅರಬೈಲ್ ಘಾಟ್ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಾರಂಭದಲ್ಲಿ ಈ ಘಟನೆ ಅಪಘಾತದ ನಂತರ ಕಾರು ದಹನಗೊಂಡ ಪ್ರಕರಣವೆಂದು ಶಂಕಿಸಲಾಗಿದ್ದರೂ, ಕಾರಿನೊಳಗೆ ಪತ್ತೆಯಾದ ಶವವನ್ನು ನಿತೀಶ್ ಎಂದು ಗುರುತಿಸಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು. ಮೃತನ ತಂದೆ ಜಗನ್ನಾಥ್ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಬಳಿ ಇದ್ದ ಒಂದು ಕಾರು ಹಾಗೂ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೃತ ನಿತೀಶ್ ಸ್ವತಃ ರೌಡಿಶೀಟರ್ ಆಗಿದ್ದು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಅವನ ವಿರುದ್ಧ 22ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿ ಅಬ್ದುಲ್ ನಯೀಮ್ ಜೊತೆ ಈತನಿಗೆ ಹಿಂದಿನಿಂದಲೂ ಸಂಪರ್ಕವಿದ್ದು, ಹಣಕಾಸು ವ್ಯವಹಾರ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯವೇ ಕೊಲೆಗಾಗಲು ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ತನಿಖಾ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಎಸ್‌ಪಿ ದೀಪನ್ ಶ್ಲಾಘಿಸಿದ್ದಾರೆ. ಡಿವೈಎಸ್‌ಪಿ ಗೀತಾ ಪಾಟೀಲ್, ಯಲ್ಲಾಪುರ ಸಿಪಿಐ ರಮೇಶ್ ಹನ್ಪುರ್, ಪಿಎಸ್ಐ ರಮೇಶ್ ವಂದಲಿ, ಸೈದಪ್ಪ ಗೌಡಿ ಸೇರಿದಂತೆ ಇತರ ಅಧಿಕಾರಿಗಳು ತನಿಖೆಯಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.