


ಡೈಲಿವಾರ್ತೆ: 27/ಜು./2026


ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಗೆ ಗುಂಡಿನ ಸದ್ದು: ವಿದ್ಯಾರ್ಥಿಗಳಿಗೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್‌ಟೇಬಲ್ ಅಮಾನತು

ಪಾಟ್ನಾ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಬಿಹಾರದಲ್ಲಿ ನಡೆದ ‘ಬಿಹಾರ ಬಂದ್’ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳತ್ತ AK-47 ರೈಫಲ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ.
ಜುಲೈ 25ರಂದು ಸಿವಾನ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾನ್ಸ್‌ಟೇಬಲ್ AK-47 ಹಿಡಿದು ಗುಂಡು ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಇಲಾಖೆ ತನಿಖೆ ಆರಂಭಿಸಿದ್ದು, ಸಂಬಂಧಿತ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ವರದಿಗಳ ಪ್ರಕಾರ, ಪ್ರತಿಭಟನೆ ವೇಳೆ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಪಾಟ್ನಾದ ಜಯಪ್ರಭಾ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ.
ಗಾಯಾಳುಗಳಲ್ಲಿ 15 ವರ್ಷದ ಎಂಡಿ ಆರಿಫ್ ಎಂಬ ಬಾಲಕ ಸಹ ಸೇರಿದ್ದಾನೆ. ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಪ್ರತಿಭಟನೆ ಸಮಯದಲ್ಲಿ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ ಈತನ ಕುತ್ತಿಗೆಗೆ ಗುಂಡು ತಗುಲಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಕಾನ್ಸ್‌ಟೇಬಲ್ ಗುಂಡು ಹಾರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿ, ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ವೇಳೆ ಪೊಲೀಸರು ರಿವಾಲ್ವಾರ್ ಕೈಯಲ್ಲಿ ಹಿಡಿದು ಸಾಗಿರುವ ವಿಡಿಯೋಗಳು ಸಹ ಕ್ಯಾಮೆರಾದಲ್ಲಿ ಸೆರೆಯಾಗಿವೆ.