ಡೈಲಿವಾರ್ತೆ: 27/ಮೇ/2026

ಭಟ್ಕಳ: ಮುರಿನಕಟ್ಟೆ ವಿವಾದ – 50ಕ್ಕೂ ಹೆಚ್ಚು ಜನರ ಬಂಧನ; ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿ

​ಭಟ್ಕಳ: ತಾಲೂಕಿನ ನವತ್ ಕಾಲೋನಿಯ ಓಲ್ಡ್ ಸಿಟಿ ಲೈಟ್ ಹೋಟೆಲ್ ಬಳಿ ನಡೆದ ‘ಮುರಿನಕಟ್ಟೆ’ ವಿವಾದಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದು, ಇದುವರೆಗೆ 50 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಸೇರಿದ್ದಾರೆ ಎನ್ನಲಾಗಿದ್ದು, ತಲೆಮರೆಸಿಕೊಂಡಿರುವ ಇತರ ಹಲವು ಯುವಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸದ್ಯ ಬಂಧಿತರಲ್ಲಿ ಕೆಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ ಹಲವಾರು ಆರೋಪಿಗಳನ್ನು ಕಾರವಾರ ಜೈಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


​ಘಟನೆಯ ಹಿನ್ನೆಲೆ:
​ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದ್ದ ಐತಿಹಾಸಿಕ ಮಾರಿಕಾಂಬೆ ದೇವಸ್ಥಾನದ ಸಂಪ್ರದಾಯಕ್ಕೆ ಸೇರಿದ ‘ಮುರಿನಕಟ್ಟೆ’ಯನ್ನು (ಅಮ್ಮನವರ ಹೊರೆ ಇಡುವ ಸ್ಥಳ) ಇತ್ತೀಚೆಗೆ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಲಾಗಿತ್ತು. ತದನಂತರ ಸಂಚಾರಕ್ಕೆ ತೊಂದರೆಯಾಗದಂತೆ ಲಭ್ಯವಿದ್ದ ಸರ್ಕಾರಿ ಜಮೀನಿನಲ್ಲಿ ಸ್ಥಳೀಯರು ತಾತ್ಕಾಲಿಕವಾಗಿ ದೇವರಕಟ್ಟೆಯನ್ನು ಮರುನಿರ್ಮಿಸಿದ್ದರು. ಆದರೆ, ಮೇ 24ರ ಭಾನುವಾರದಂದು ಕಿಡಿಗೇಡಿಗಳು ಈ ಕಟ್ಟೆಯನ್ನು ಏಕಾಏಕಿ ಧ್ವಂಸಗೊಳಿಸಿದ್ದರು. ಈ ಹೊಸ ಕಟ್ಟೆಯ ನಿರ್ಮಾಣಕ್ಕೆ ಮತ್ತೊಂದು ಕೋಮಿನ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿ, ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

​ಪ್ರಸ್ತುತ ಭಟ್ಕಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕ (IGP) ಅಮಿತ್ ಸಿಂಗ್ ಅವರು ಕಳೆದ ಎರಡು ದಿನಗಳಿಂದ ಭಟ್ಕಳದಲ್ಲೇ ಮೊಕ್ಕಾಂ ಹೂಡಿ ಕಾನೂನು ಸುವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇವರೊಂದಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಹಾಗೂ ಭಟ್ಕಳ ಡಿವೈಎಸ್ಪಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸೂಕ್ಷ್ಮ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.


​ಹಬ್ಬದ ಮುನ್ನಾದಿನ ಮುನ್ನೆಚ್ಚರಿಕೆ: ನಿಷೇಧಾಜ್ಞೆ ಜಾರಿ
​ಮೇ 28 ರಂದು ದೇಶಾದ್ಯಂತ ಈದ್-ಉಲ್-ಅಧಾ (ಬಕ್ರೀದ್) ಹಬ್ಬವನ್ನು ಆಚರಿಸಲಾಗುತ್ತಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 27 ರ ಸಂಜೆಯವರೆಗೆ ಮೂರು ದಿನಗಳ ಕಾಲ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಮೆರವಣಿಗೆ, ಸಭೆ-ಸಮಾರಂಭ ಹಾಗೂ ಪ್ರತಿಭಟನೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.