




ಡೈಲಿವಾರ್ತೆ: 27/ಮೇ/2026


ಕುಂದಾಪುರ: ಹೊಸೂರು ಸರ್ಕಾರಿ ಜಮೀನು ಒತ್ತುವರಿ ಹಗರಣ – ಭ್ರಷ್ಟ ಅಧಿಕಾರಿಗಳ ವಿರುದ್ಧ ಕುಂದಾಪುರ ಎಸಿ ಕಚೇರಿ ಮುಂದೆ ‘ಒಲೆ ಹೂಡಿ ಅನ್ನ ಬೇಯಿಸುವ’ ವಿಭಿನ್ನ ಧರಣಿ ಸತ್ಯಾಗ್ರಹ!

ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿ ಹೊಸೂರು ಗ್ರಾಮದ ಸರ್ವೆ ನಂಬರ್ 141ರ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ದಲಿತ ಪರ ಹೋರಾಟಗಾರ್ತಿ ನಾಗರತ್ನ ನೇತೃತ್ವದಲ್ಲಿ ಕುಂದಾಪುರ ಉಪ ವಿಭಾಗ ಸಹಾಯಕ ಕಮಿಷನರ್ (AC) ಕಚೇರಿ ಮುಂದೆ ಇಂದಿನಿಂದ (ಮೇ 27) “ಒಲೆ ಹೂಡಿ – ಅನ್ನ ಬೇಯಿಸುವ” ವಿಭಿನ್ನ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ರಾಜ್ಯ ಕಂದಾಯ ಸಚಿವರಿಗೆ ಉಪ ವಿಭಾಗಾಧಿಕಾರಿಗಳ ಮೂಲಕ ಹಕ್ಕೋತ್ತಾಯ ಪತ್ರ ಸಲ್ಲಿಸಿರುವ ಪ್ರತಿಭಟನಾಕಾರರು, ಸರ್ಕಾರಿ ಜಮೀನು ಒತ್ತುವರಿಗೆ ನೇರ ಸಹಕಾರ ನೀಡಿದ ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ (FDA) ರಾಘವೇಂದ್ರ ಮತ್ತು ಕರ್ತವ್ಯ ಲೋಪ ಎಸಗಿದ ಕುಂದಾಪುರ ತಹಶೀಲ್ದಾರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಅಕ್ರಮ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸುವಂತೆ ಆಗ್ರಹಿಸಿದ್ದಾರೆ.
ಸ್ಮಶಾನಕ್ಕಾಗಿ ಕಾಯ್ದಿರಿಸಬೇಕಾಗಿದ್ದ ಜಾಗ ಕಬಳಿಕೆ!
ಹೊಸೂರು ಗ್ರಾಮದ ಸರ್ವೆ ನಂಬರ್ 141 ರ ಜಮೀನಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಸ್ಮಶಾನ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಬಹಳ ಕಾಲದಿಂದ ಕಂದಾಯ ಇಲಾಖೆಗೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ, ಇದೇ ಜಾಗವನ್ನು ಕಬಳಿಸುವ ಹಠಕ್ಕೆ ಬಿದ್ದ ಗಣಪು ಶೆಡ್ತಿ ಮತ್ತು ಮಂಜುಳಾ ಶೆಡ್ತಿ ಎಂಬುವವರು ಜಾಗಕ್ಕೆ ಬೇಲಿ ನಿರ್ಮಿಸಲು ಮುಂದಾದಾಗ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದರು.
ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಕಂದಾಯ ಇಲಾಖೆ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಇದೊಂದು “ಸರ್ಕಾರಿ ಜಾಗ” ಎಂದು ನೋಟೀಸ್ ಅಂಟಿಸಿದ್ದರು. ಆದರೆ, ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅತಿ ಕ್ರಮಣದಾರರು, ಸರ್ಕಾರಿ ನೋಟೀಸನ್ನು ಕಿತ್ತು ಬಿಸಾಡಿ, ಅದೇ ಜಾಗದಲ್ಲಿ ಎರಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಇತ್ತೀಚೆಗೆ ಗೃಹಪ್ರವೇಶವನ್ನೂ ನೆರವೇರಿಸಿದ್ದಾರೆ ಎಂದು ಹೋರಾಟಗಾರರು ಗಂಭೀರವಾಗಿ ಆರೋಪಿಸಿದ್ದಾರೆ.
ಕಂದಾಯ ನಿರೀಕ್ಷಕ ರಾಘವೇಂದ್ರ ವಿರುದ್ಧ ಭ್ರಷ್ಟಾಚಾರ, ಬೆದರಿಕೆ ಆರೋಪ.?
ಅಕ್ರಮ ಕಾಮಗಾರಿ ನಡೆಯುತ್ತಿರುವಾಗ ಹಂತ ಹಂತವಾಗಿ ವಂಡ್ಸೆ ಕಂದಾಯ ನಿರೀಕ್ಷಕ FDA ರಾಘವೇಂದ್ರ ಅವರ ಗಮನಕ್ಕೆ ತರಲಾಗಿದ್ದರೂ, ಅವರು ಅಕ್ರಮ ತಡೆಯುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಬದಲಿಗೆ, ಅತಿಕ್ರಮಣದಾರರೊಂದಿಗೆ ಶಾಮೀಲಾಗಿ ಕಟ್ಟಡ ಪೂರ್ಣಗೊಳ್ಳುವವರೆಗೆ ಪರೊಕ್ಷವಾಗಿ ಬೆಂಬಲ ನೀಡಿದ್ದಾರೆ. ಅಕ್ರಮವನ್ನು ಪ್ರಶ್ನಿಸಿದ ಹೋರಾಟಗಾರರ ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿರುವ ರಾಘವೇಂದ್ರ, ನ್ಯಾಯ ಕೇಳಲು ಕಚೇರಿಗೆ ಹೋದ ಸಾರ್ವಜನಿಕರಿಗೆ “ನಿಮ್ಮ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸುತ್ತೇನೆ” ಎಂದು ನೇರ ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಹೈಕೋರ್ಟ್‌ಗೆ ವರದಿ ನೀಡದೆ ಒತ್ತುವರಿದಾರರಿಗೆ ಸಹಕರಿಸಿದ ತಹಶೀಲ್ದಾರ್!
ಸದರಿ ಜಾಗದಲ್ಲಿ ಯಾವುದೇ ಕೃಷಿ ಚಟುವಟಿಕೆ ಇಲ್ಲದಿರುವುದನ್ನು ಸ್ವತಃ ಕುಂದಾಪುರ ತಹಶೀಲ್ದಾರ್ ಅವರೇ ಸ್ಥಳ ಮಹಜರು ನಡೆಸಿ ದೃಢಪಡಿಸಿಕೊಂಡಿದ್ದರು. ಆದರೆ, ಅತಿಕ್ರಮಣದಾರರು “ಅಕ್ರಮ ಸಕ್ರಮ ಅಡಿಯಲ್ಲಿ ಮಂಜೂರಾತಿ ವಿಳಂಬವಾಗುತ್ತಿದೆ” ಎಂದು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದಾಗ, ಹೈಕೋರ್ಟ್ ತಹಶೀಲ್ದಾರ್ ಅವರಿಗೆ ಪ್ಯಾರಾವೈಸ್ ರಿಪೋರ್ಟ್ (Para-wise Report) ಸಲ್ಲಿಸಲು ನೋಟೀಸ್ ಜಾರಿ ಮಾಡಿತ್ತು. ಆದರೆ, ಕುಂದಾಪುರ ತಹಶೀಲ್ದಾರ್ ಅವರು ನ್ಯಾಯಾಲಯ ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದೇ ಕಾಲಹರಣ ಮಾಡುವ ಮೂಲಕ ಒತ್ತುವರಿದಾರರು ಭೂಮಿ ಕಬಳಿಸಲು ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರ ಪ್ರಮುಖ ಹಕ್ಕೋತ್ತಾಯಗಳು:
ಸರ್ಕಾರಿ ಜಮೀನು ಅತಿಕ್ರಮಣಕ್ಕೆ ಸಂಪೂರ್ಣ ಸಹಕಾರ ನೀಡಿ, ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ವಂಡ್ಸೆ ಆರ್‌ಐ ರಾಘವೇಂದ್ರ ರವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು.
ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಸಕಾಲದಲ್ಲಿ ವರದಿ ನೀಡದೆ ಕಾನೂನು ದುರುಪಯೋಗಕ್ಕೆ ಕಾರಣರಾದ ಕುಂದಾಪುರ ತಹಶೀಲ್ದಾರ್ ರವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ಹೊಸೂರು ಗ್ರಾಮದ ಸರ್ವೆ ನಂಬರ್ 141 ರಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಗಣಪ ಶೆಡ್ತಿ ಮತ್ತು ಮಂಜುಳಾ ಶೆಡ್ತಿ ಯವರ ಎರಡೂ ಅಕ್ರಮ ಕಟ್ಟಡಗಳನ್ನು ತಕ್ಷಣವೇ ಧ್ವಂಸಗೊಳಿಸಿ, ಭೂಮಿಯನ್ನು ಸರ್ಕಾರಿ ಸ್ವಾಧೀನಕ್ಕೆ ಪಡೆಯಬೇಕು.
ಎಚ್ಚರಿಕೆ: ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ಅಧಿಕಾರಿಗಳೇ ಭ್ರಷ್ಟಾಚಾರಕ್ಕೆ ಇಳಿದಿರುವುದು ಖಂಡನೀಯ. ಈ ನ್ಯಾಯಯುತ ಬೇಡಿಕೆಗಳು ತಕ್ಷಣವೇ ಈಡೇರದಿದ್ದಲ್ಲಿ ಎಸಿ ಕಚೇರಿ ಮುಂಭಾಗದ ನಮ್ಮ ‘ಒಲೆ ಹೂಡಿ ಅನ್ನ ಬೇಯಿಸುವ’ ವಿಭಿನ್ನ ಧರಣಿ ಸತ್ಯಾಗ್ರಹವನ್ನು ಮತ್ತಷ್ಟು ಉಗ್ರಗೊಳಿಸಲಾಗುವುದು ಎಂದು ದಲಿತ ಪರ ಹೋರಾಟಗಾರ್ತಿ ನಾಗರತ್ನ ಎಚ್ಚರಿಸಿದ್ದಾರೆ.