




ಡೈಲಿವಾರ್ತೆ: 27/ಮೇ/2026


ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಮೇಜರ್ ಸರ್ಜರಿ’: ಜಾತಿ ಸಮೀಕರಣದ ಆಧಾರದ ಮೇಲೆ ಹೈಕಮಾಂಡ್ ಹೈವೋಲ್ಟೇಜ್ ತಂತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ಬೃಹತ್ ರಾಜಕೀಯ ಮುನ್ನಡೆಗೆ ಸ್ಕೆಚ್ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆದು, ನೂತನ ಸಿಎಂ ಆಯ್ಕೆಯಾದ ಬಳಿಕವೂ ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಕೈತಪ್ಪದಂತೆ ತಡೆಯಲು ವರಿಷ್ಠರು ಹತ್ತು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಕೇವಲ ಮುಖ್ಯಮಂತ್ರಿ ಹುದ್ದೆ ಬದಲಾವಣೆಗೆ ಸೀಮಿತವಾಗದೆ, ಜಾತಿ ಸಮೀಕರಣದ ಆಧಾರದ ಮೇಲೆ ಸರ್ಕಾರ ಮತ್ತು ಸಂಘಟನೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ತರಲು ವರಿಷ್ಠರು ಮುಂದಾಗಿದ್ದಾರೆ. ಸಿಎಂ ಬದಲಾವಣೆಯಿಂದ ಯಾವುದೇ ಪ್ರಮುಖ ಸಮುದಾಯಕ್ಕೆ ಅಸಮಾಧಾನವಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ಹೈಕಮಾಂಡ್‌ನ ಪ್ರಮುಖ ಆದ್ಯತೆಯಾಗಿದೆ.
ನಾಲ್ವರಿಗೆ ಉಪಮುಖ್ಯಮಂತ್ರಿ ಸ್ಥಾನ?
ನೂತನ ಮುಖ್ಯಮಂತ್ರಿಯ ಆಯ್ಕೆಯ ಜೊತೆಗೆ, ಸಚಿವ ಸಂಪುಟದಲ್ಲಿ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಒಬಿಸಿ, ದಲಿತ, ಲಿಂಗಾಯತ ಮತ್ತು ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ನಾಲ್ವರನ್ನು ಡಿಸಿಎಂ ಸ್ಥಾನಕ್ಕೆ ಪರಿಗಣಿಸಲು ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ.
ಡಿಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕರು:
ದಲಿತ ಕೋಟಾ: ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಥವಾ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ.
ಒಬಿಸಿ ಕೋಟಾ: ಈ ಕೋಟಾದಡಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ.
ಮುಸ್ಲಿಂ ಕೋಟಾ: ಹಾಲಿ ಸಚಿವ ಜಮೀರ್ ಅಹಮದ್ ಖಾನ್ ಅಥವಾ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆಯಿದೆ.
ಲಿಂಗಾಯತ ಕೋಟಾ: ಸಚಿವರುಗಳಾದ ಈಶ್ವರ್ ಖಂಡ್ರೆ ಮತ್ತು ಎಂ.ಬಿ. ಪಾಟೀಲ್ ರೇಸ್‌ನಲ್ಲಿದ್ದಾರೆ.
ಅಲ್ಪಸಂಖ್ಯಾತ (ಕ್ರಿಶ್ಚಿಯನ್) ಕೋಟಾ: ಹಿರಿಯ ನಾಯಕ ಕೆ.ಜೆ. ಜಾರ್ಜ್ ಅವರ ಹೆಸರೂ ಕೂಡ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಸಿಎಂ ಆಯ್ಕೆ ಬೆನ್ನಲ್ಲೇ ಕೆಪಿಸಿಸಿಗೂ ಹೊಸ ಸಾರಥಿ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (KPCC) ಹೊಸ ಸಾರಥಿಯ ನೇಮಕ ಪ್ರಕ್ರಿಯೆಯೂ ಚುರುಕುಗೊಂಡಿದೆ. ನೂತನ ಮುಖ್ಯಮಂತ್ರಿಯ ಅಧಿಕೃತ ಘೋಷಣೆಯ ಬೆನ್ನಲ್ಲೇ ಕೆಪಿಸಿಸಿಯ ನೂತನ ಅಧ್ಯಕ್ಷರ ಹೆಸರನ್ನೂ ಹೈಕಮಾಂಡ್ ಪ್ರಕಟಿಸಲಿದೆ. ಸಿಎಂ ಮತ್ತು ಡಿಸಿಎಂ ಹುದ್ದೆಗಳ ಜಾತಿ ಲೆಕ್ಕಾಚಾರವನ್ನು ಆಧರಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ. ಈ ರೇಸ್‌ನಲ್ಲಿ ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಂಚೂಣಿಯಲ್ಲಿದ್ದು, ಈಗಾಗಲೇ ಕೆಲವು ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಮನ್ನಣೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.