




ಡೈಲಿವಾರ್ತೆ: 28/ಮೇ/2026


ಕೋಟತಟ್ಟು: ದಾನಿಗಳಿಂದ 7 ಕೊರಗ ಕುಟುಂಬಗಳಿಗೆ ಗೋದ್ರೇಜ್ ಕಪಾಟು ವಿತರಣೆ:
ಚಿಟ್ಟಿಬೆಟ್ಟು ಕೊರಗ ಕಾಲನಿಯ ಸುಧಾರಣೆಗೆ ಇಡೀ ಊರೇ ಕೈಜೋಡಿಸಿರುವುದು ಶ್ಲಾಘನೀಯ – ಆನಂದ್ ಸಿ. ಕುಂದರ್

ಕೋಟ: ಒಂದು ಕಾಲದಲ್ಲಿ ತೀರಾ ನಿಕೃಷ್ಟ ಸ್ಥಿತಿಯಲ್ಲಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಕಾಲನಿಯು ಇಂದು ಸುಸಜ್ಜಿತವಾಗಿ ಮಾರ್ಪಟ್ಟಿದೆ. ಕಳೆದ ವರ್ಷ ಪಂಚಾಯತ್ ವತಿಯಿಂದ ತಲಾ 10 ರಿಂದ 11 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಏಳು ಮನೆಗಳು ಇಲ್ಲಿನ ನಿವಾಸಿಗಳ ಜೀವನಮಟ್ಟವನ್ನು ಬದಲಾಯಿಸಿವೆ. ಪ್ರಸ್ತುತ ಈ ಕುಟುಂಬಗಳಿಗೆ ಅತ್ಯಂತ ಅಗತ್ಯವಿದ್ದ ಗೋದ್ರೇಜ್ ಕಪಾಟುಗಳನ್ನು ಒದಗಿಸಲು ಇಡೀ ಊರಿನ ಸಂಘ-ಸಂಸ್ಥೆಗಳು ಒಂದಾಗಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಧರ್ಮ ರತ್ನಾಕರ ಶ್ರೀ ಆನಂದ್ ಸಿ. ಕುಂದರ್ ಆಶಯ ವ್ಯಕ್ತಪಡಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಕಾಲೋನಿಯ ಏಳು ಮನೆಗಳಿಗೆ ಸಮಾಜ ಸೇವಕ, ಉದ್ಯಮಿ ಶ್ರೀಕಾಂತ್ ಶೆಣೈ ಅವರ ನೇತೃತ್ವದಲ್ಲಿ ವಿವಿಧ ಪ್ರಮುಖ ಸಂಘಟನೆಗಳು ಒಗ್ಗೂಡಿ ಹಮ್ಮಿಕೊಂಡಿದ್ದ ಗೋದ್ರೇಜ್ ಕಪಾಟು ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇಂದು ಕೊರಗ ಸಮುದಾಯವನ್ನು ಕೀಳಾಗಿ ಕಾಣುವ ಕಾಲಘಟ್ಟ ಇದಲ್ಲ ಅವರು ನಮ್ಮಂತೆಯೇ ಈ ಸಮಾಜದಲ್ಲಿ ಸಮಾನರಾಗಿ ಗುರುತಿಸಿಕೊಂಡಿದ್ದಾರೆ ಎಂದರು.

ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ:
ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಆನಂದ್ ಸಿ. ಕುಂದರ್ ಅವರು ಸರ್ಕಾರ, ಪಂಚಾಯತ್ ಹಾಗೂ ದಾನಿಗಳು ನಿಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ನೀವು ಇವುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು, ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಮಕ್ಕಳು ಸುಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ಸ್ಥಿತಿಗೆ ತಲುಪಿದಾಗ ಮಾತ್ರ ನಮಗೆಲ್ಲರಿಗೂ ನಿಜವಾದ ಸಂತೋಷ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಗೋದ್ರೇಜ್ ಕಪಾಟು ನಿರ್ಮಿಸಿ ಅತಿ ಕಡಿಮೆ ಬೆಲೆಯಲ್ಲಿ ಒದಗಿಸಿದ ಪ್ರವೀಣ್ ಮಣೂರು ಇವರಿಗೆ ಕೃತಜ್ಞತೆ ಸಲ್ಲಿಸಿ ಗೌರವಿಸಲಾಯಿತು.
ಸಭೆಯಲ್ಲಿ ಟ್ರಾವೆಲಿಂಕ್ಸ್ ಫ್ರೆಂಡ್ಸ್ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಗೌರವಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಶ್ರೀದೇವಿ ಕಿರಣ್ ಕಾಂಪ್ಲೆಕ್ಸ್ ಗ್ರೂಪ್ ಮುಖ್ಯಸ್ಥ ಮಹೇಶ್ ಶೆಟ್ಟಿ , ಮಣೂರು ಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ ಅಶೋಕ್ ಶೆಟ್ಟಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ ಮುಖ್ಯಸ್ಥ ಪುಂಡಲೀಕ ಮೊಗವೀರ, ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಸಾಲಿಯಾನ್, ನಡುವೆ ನಿಸ್ವಾರ್ಥ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಗೋಪಿನಾಥ್ ಕಿಣಿ, ದಸಂಸ ಕೋಟ ಹೋಬಳಿಯ ಶ್ಯಾಮಸುಂದರ್ ತಕ್ಕಟ್ಟೆ, ಕುಮಾರ್ ಕೋಟ,bರಾಜು ಬೆಟ್ಟಿನ ಮನೆ, ಶ್ರೀ ದೇವಿಕಿರಣ್ ಕಾಂಪ್ಲೆಕ್ಸ್ ನ ಪ್ರಮುಖರಾದ ಚೇತನ್ ಕುಮಾರ್, ಅವಿನಾಶ್ ಶೆಟ್ಟಿ, ಜ್ಞಾನೇಶ್ ಆಚಾರ್, ಪಂಚವರ್ಣದ ದಿನೇಶ್ ಆಚಾರ್, ನವೀನ್ ಶೆಟ್ಟಿ, ಕೊರಗ ಸಮುದಾಯದ ಲಕ್ಷ್ಮೀ, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಕೀಲರಾದ ಟಿ.ಮಂಜುನಾಥ್ ಗಿಳಿಯಾರು ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕ ಶ್ರೀಕಾಂತ್ ಶೆಣೈ ಕೋಟ ಕೃತಜ್ಞತೆ ಸಲ್ಲಿಸಿದರು.
ಸಂಘಸಂಸ್ಥೆಗಳಾದ ಸಕಡ್ ಫೌಂಡೇಶನ್ ಕೋಟ,ಕೋಟದ ಪಂಚವರ್ಣ ಸಂಘಟನೆ ಕೋಟ, ಶ್ರೀ ಟೀಮ್ ದೇವಿಕಿರಣ್ ಕೋಟ ,ಜೈಕುಂದಾಪ್ರ ಸೇವಾ ಟ್ರಸ್ಟ್ ,ಟ್ರಾವೆಲಿಂಕ್ಸ್ ಫ್ರೆಂಡ್ಸ್ ಕೋಟ,ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಗ್ರೋದೇಜ್ ಅನ್ನು ನೀಡಿ ಸಹಕರಿಸಿದರು.