


ಡೈಲಿವಾರ್ತೆ: 15/ಜೂ./2026


ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ – ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಮಣಿಪಾಲ: ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿದರೂ, ಅವರ ಸಮಯೋಚಿತ ನಿರ್ಧಾರದಿಂದಾಗಿ ಬಸ್‌ನಲ್ಲಿದ್ದ ಹತ್ತಾರು ವಿದ್ಯಾರ್ಥಿಗಳು ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಗಂಭೀರ ಘಟನೆ ಸೋಮವಾರ ಇಲ್ಲಿನ ಮಣಿಪಾಲದಲ್ಲಿ ನಡೆದಿದೆ.
ಘಟನೆಯ ವಿವರ:
ಮಣಿಪಾಲದ ಪ್ರಸಿದ್ಧ ಮಾಧವ ಕೃಪಾ ಶಾಲೆಗೆ ಸೇರಿದ ಬಸ್ ಎಂದಿನಂತೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ಬಸ್ ಮಣಿಪಾಲ ತಲುಪುತ್ತಿದ್ದಂತೆ, ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು (54) ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡರು. ತಮಗೆ ಪ್ರಜ್ಞೆ ತಪ್ಪುವ ಮುನ್ನ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಸುರೇಶ್, ವಿದ್ಯಾರ್ಥಿಗಳ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಿದರು.
ವಾಹನದ ಮೇಲಿನ ನಿಯಂತ್ರಣ ಸಂಪೂರ್ಣ ಕೈತಪ್ಪುವ ಮುನ್ನವೇ ಅತ್ಯಂತ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಬಸ್ಸನ್ನು ರಸ್ತೆಯ ಬದಿಗೆ ಸರಿಸಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯಲ್ಲಿ ಬಸ್ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ಬಸ್ಸು ನಿಂತಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸದೆ, ಸಂಭಾವ್ಯ ಭಾರಿ ದುರಂತವೊಂದು ಅತ್ಯಂತ ಸಫಲವಾಗಿ ತಪ್ಪಿದಂತಾಗಿದೆ.
ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಸಂಪೂರ್ಣ ಸುರಕ್ಷಿತರಾಗಿದ್ದಾರೆ.
ತಮ್ಮ ಪ್ರಾಣವೇ ಸಂಕಷ್ಟದಲ್ಲಿದ್ದಾಗಲೂ ಧೃತಿಗೆಡದೆ, ಬಸ್ಸಿನಲ್ಲಿದ್ದ ಶಾಲಾ ಮಕ್ಕಳ ಜೀವ ಉಳಿಸಿದ ಚಾಲಕ ಸುರೇಶ್ ಅವರ ಕರ್ತವ್ಯ ಪ್ರಜ್ಞೆ ಮತ್ತು ಧೈರ್ಯ ನಿಜಕ್ಕೂ ಶ್ಲಾಘನೀಯ ಎಂದು ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ನಿವಾಸಿಗಳು ಹಾಗೂ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಶಾಲಾ ಸಿಬ್ಬಂದಿ ಚಾಲಕ ಸುರೇಶ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿ, ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.