ಡೈಲಿವಾರ್ತೆ: 15/ಜೂ./2026

ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ವಿದ್ಯಾ ಸಂಸ್ಥೆ ಯಲ್ಲಿ-ರಕ್ಷಕ ಶಿಕ್ಷಕ ಸಂಘದ ಮಹಾಸಭೆ:ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು-ಶಿಕ್ಷಕರ ಸಮನ್ವಯ ಅಗತ್ಯ- ಫಿಲೋಮಿನಾ ಫೆರ್ನಾಂಡಿಸ್

ಗಂಗೊಳ್ಳಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯುತ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಮಕ್ಕಳ ಭಾವನೆಗಳು ಮತ್ತು ಸಮಸ್ಯೆಗಳನ್ನು ಅರಿಯಲು ಪೋಷಕರು ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಪೋಕ್ಸೋ ಸಮಾಲೋಚಕಿ ಶ್ರೀಮತಿ ಫಿಲೋಮಿನಾ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾದ ತ್ರಿವಳಿ ಶಾಲೆಗಳ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಪೋಷಕರು ನಿಗಾವಹಿಸುವುದರ ಜೊತೆಗೆ, ಅವರ ಭಾವನಾತ್ಮಕ ಬೆಳವಣಿಗೆಗೂ ಪ್ರೋತ್ಸಾಹ ನೀಡಬೇಕು. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ಅವರು ಹೇಳಿದರು.

ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಧರ್ಮಭಗಿನಿ ವಿಜಯ ಕ್ರಾಸ್ತಾ ಶಾಲೆಯ ನಿಯಮಾವಳಿಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಕರಾಟೆ, ಅಬಾಕಸ್, ಕ್ರಿಕೆಟ್ ತರಬೇತಿ ಸೇರಿದಂತೆ ಈ ವರ್ಷದಿಂದ ಆರಂಭಗೊಳ್ಳಲಿರುವ ಫಿಟ್ನೆಸ್ ತರಗತಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ ಧರ್ಮಭಗಿನಿ ಸನಿಶಾ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಮೆಲ್ ಸಂಸ್ಥೆಯ ಮುಖ್ಯಸ್ಥೆ ಧರ್ಮಭಗಿನಿ ಗ್ರೇಸಿ ಲೋಬೋ, ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಧರ್ಮಭಗಿನಿ ಕ್ರೆಸೆನ್ಸ್, ಉಭಯ ಶಾಲೆಗಳ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ನಾಗರಾಜ್ ಖಾರ್ವಿ ಹಾಗೂ ಶ್ರೀಮತಿ ಶಾಂತಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಶಾಂತಿ ಕ್ರಾಸ್ತಾ ಸ್ವಾಗತಿಸಿದರು. ಶಿಕ್ಷಕಿ ಗೀತಾ ವಂದಿಸಿದರು. ಶಿಕ್ಷಕಿ ಧರ್ಮಭಗಿನಿ ಐಡಾ ಕಾರ್ಯಕ್ರಮ ನಿರೂಪಿಸಿದರು.