


ಡೈಲಿವಾರ್ತೆ: 15/ಜೂ./2026


ಜಮೀರ್‌ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶ: ಪಾದರಾಯನಪುರದಲ್ಲಿ ಬೃಹತ್ ಪ್ರತಿಭಟನೆ, ಇಮ್ರಾನ್ ಪಾಷಾ ಸೇರಿ ಹಲವರು ವಶಕ್ಕೆ

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಮೊದಲ ಹಂತದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದನ್ನು ಖಂಡಿಸಿ, ಇಂದು ನಗರದ ಪಾದರಾಯನಪುರದಲ್ಲಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಇಮ್ರಾನ್ ಪಾಷಾ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಜಮೀರ್ ಅಹಮ್ಮದ್ ಅವರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕೆಂದು ಒತ್ತಾಯಿಸಿ ಇಮ್ರಾನ್ ಪಾಷಾ ನೇತೃತ್ವದಲ್ಲಿ ‘ವಿಧಾನಸೌಧ ಚಲೋ’ ಪಾದಯಾತ್ರೆಗೆ ಕರೆ ನೀಡಲಾಗಿತ್ತು. ಆದರೆ, ಹೈಕೋರ್ಟ್ ನಿರ್ದೇಶನದನ್ವಯ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆಗೆ ಅವಕಾಶವಿಲ್ಲದ ಕಾರಣ ಪೊಲೀಸರು ಪಾದಯಾತ್ರೆಗೆ ಅನುಮತಿ ನಿರಾಕರಿಸಿದರು. ಮುಂಜಾಗ್ರತಾ ಕ್ರಮವಾಗಿ ಹೊಸಹಳ್ಳಿ ಫ್ಲೈಓವರ್ ಮತ್ತು ಪಾದರಾಯನಪುರ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಸ್ಥಳದಲ್ಲಿ ಕೆಎಸ್‌ಆರ್‌ಪಿ (KSRP) ಹಾಗೂ ಸಿಆರ್ ತುಕಡಿಗಳನ್ನು ನಿಯೋಜಿಸಿ ಬಿಗುವಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಸ್ವಯಂಪ್ರೇರಿತ ಬಂದ್: ಪೊಲೀಸರೊಂದಿಗೆ ನೂಕಾಟಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾದರಾಯನಪುರ ಮುಖ್ಯ ರಸ್ತೆಯ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಜಮೀರ್ ಅಹಮ್ಮದ್ ಅವರ ಪೋಸ್ಟರ್‌ಗಳನ್ನು ಹಿಡಿದ ನೂರಾರು ಮಹಿಳೆಯರು ಮತ್ತು ಪುರುಷರು ಇಮ್ರಾನ್ ಪಾಷಾ ಕಚೇರಿ ಬಳಿ ಜಮಾಯಿಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ಗಲ್ಲಿಗಳಲ್ಲಿಯೇ ತಡೆಯಲು ಯತ್ನಿಸಿದರಾದರೂ, ಪೊಲೀಸರೊಂದಿಗೆ ತೀವ್ರ ನೂಕಾಟ-ತಳ್ಳಾಟ ನಡೆಸಿದ ಪ್ರತಿಭಟನಾಕಾರರು ಮುಖ್ಯ ರಸ್ತೆಗೆ ಧಾವಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಮೀರ್ ಅಹಮ್ಮದ್ ಅವರು ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗದಿರುವುದು ಸಮುದಾಯಕ್ಕೆ ತೀವ್ರ ನೋವು ತಂದಿದೆ. ಹಿಂದೆ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಐದು ಮುಸ್ಲಿಂ ಮುಖಂಡರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಪ್ರಸ್ತುತ ಸಂಪುಟದಲ್ಲೂ ಜಮೀರ್ ಅವರಿಗೆ ಸ್ಥಾನ ಸಿಗಲೇಬೇಕು. ನಾನು ಜೆಡಿಎಸ್ ಪಕ್ಷದಲ್ಲಿದ್ದರೂ ಜಮೀರ್ ಅವರಿಗಾಗಿ ಈ ಹೋರಾಟ ಮಾಡುತ್ತಿದ್ದೇನೆ. ಒಂದು ವೇಳೆ ಅವರಿಗೆ ಅವಕಾಶ ಸಿಗದಿದ್ದರೆ ಮುಂದೆಯೂ ಹೋರಾಟ ತೀವ್ರಗೊಳ್ಳಲಿದೆ ಎಂದು ನಗರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಹೇಳಿದ್ದಾರೆ.
ಪ್ರತಿಭಟನಾಕಾರರ ಬಂಧನ, ಪರಿಸ್ಥಿತಿ ನಿಯಂತ್ರಣ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳದಲ್ಲಿದ್ದ ಇಮ್ರಾನ್ ಪಾಷಾ ಅವರನ್ನು ವಶಕ್ಕೆ ಪಡೆದರು. ಈ ವೇಳೆ ಆಕ್ರೋಶಗೊಂಡ ಬೆಂಬಲಿಗರು ಪೊಲೀಸ್ ವಾಹನದ ಹಿಂದೆಯೇ ಓಡಿ, ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು. ತಕ್ಷಣವೇ ರಸ್ತೆಗೆ ಬಿಎಂಟಿಸಿ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿದ ಪೊಲೀಸರು, ಪ್ರತಿಭಟನೆಯಲ್ಲಿದ್ದ ಮಹಿಳೆಯರು ಸೇರಿದಂತೆ ನೂರಾರು ಜನರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಸದ್ಯ ಪೊಲೀಸರು ಸಾರ್ವಜನಿಕರನ್ನು ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.