ಡೈಲಿವಾರ್ತೆ: 16/ಜೂ./2026

ಬೈಂದೂರು: ಹಳೆಯ ದ್ವೇಷ, ಮಾತುಕತೆಯ ನೆಪದಲ್ಲಿ ಕರೆದು ಯುವಕನ ಮೇಲೆ ಭೀಕರ ಹಲ್ಲೆ – ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬೈಂದೂರು: ಅವನ ಜೊತೆ ಸೇರಬೇಡ ಎಂದು ಹಿತವಚನ ಹೇಳಿದ್ದನ್ನೇ ದ್ವೇಷವಾಗಿಟ್ಟುಕೊಂಡು, ಮಾತುಕತೆಯ ನೆಪದಲ್ಲಿ ಯುವಕನೋರ್ವನನ್ನು ಸಾರ್ವಜನಿಕ ಸ್ಥಳಕ್ಕೆ ಕರೆಸಿಕೊಂಡು ನಾಲ್ವರ ಗ್ಯಾಂಗ್ ಏಕಾಏಕಿ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಬೈಂದೂರಿನ ತೊಂಡೆಮಕ್ಕಿ ಎಂಬಲ್ಲಿ ಸಂಭವಿಸಿದೆ.

ಬೈಂದೂರಿನ ತೊಂಡೆಮಕ್ಕಿ ಸೂರ್ಕುಂದ ನಿವಾಸಿ ರಾಘವೇಂದ್ರ ದೇವಾಡಿಗ (26) ಹಲ್ಲೆಗೊಳಗಾದ ದುರ್ದೈವಿ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಯುವಕ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ವಿವರ:
ಜೂನ್ 11ರಂದು ರಾಘವೇಂದ್ರ ಅವರು ತಮ್ಮ ಪರಿಚಯದ ನಾಗರಾಜ ದೊಂಬೆ ಎಂಬಾತನಿಗೆ ನೀನು ಪ್ರದೀಪ್ ಶೆಟ್ಟಿಯೊಂದಿಗೆ ಸೇರಬೇಡ, ಆತ ಸರಿಯಿಲ್ಲ ಎಂದು ಕಿವಿಮಾತು ಹೇಳಿದ್ದರು. ಆದರೆ, ನಾಗರಾಜ ಈ ವಿಷಯವನ್ನು ನೇರವಾಗಿ ಪ್ರದೀಪ್ ಶೆಟ್ಟಿಗೆ ಮುಟ್ಟಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರದೀಪ್ ಶೆಟ್ಟಿ, ರಾಘವೇಂದ್ರನಿಗೆ ಬುದ್ಧಿ ಕಲಿಸಲು ತನ್ನ ಸಹಚರರೊಂದಿಗೆ ಸೇರಿ ಹೊಂಚು ಹಾಕಿದ್ದಾನೆ.

​ಸಂಚು ನಡೆಸಿ ಕರೆಸಿಕೊಂಡ ಆರೋಪಿಗಳು:


ಜೂನ್ 12ರಂದು ಮಧ್ಯಾಹ್ನ ರಾಘವೇಂದ್ರ ಅವರು ಮನೆಯಲ್ಲಿದ್ದಾಗ, ಆರೋಪಿ ರಾಜೇಶ್ ಎಂಬಾತ ಪ್ರದೀಪ್‌ನ ಮೊಬೈಲ್‌ನಿಂದ ಕರೆ ಮಾಡಿ, ನಿನ್ನ ಹತ್ತಿರ ತುರ್ತಾಗಿ ಮಾತನಾಡಬೇಕು, ತೊಂಡೆಮಕ್ಕಿ ಶಾರದಾ ವೇದಿಕೆಯ ಬಳಿ ಬಾ ಎಂದು ಕರೆಸಿಕೊಂಡಿದ್ದಾನೆ. ಇದನ್ನು ನಂಬಿ ರಾಘವೇಂದ್ರ ಅವರು ಮಧ್ಯಾಹ್ನ 3:45ರ ಸುಮಾರಿಗೆ ಶಾರದಾ ವೇದಿಕೆಯ ಬಳಿ ಬಂದಾಗ, ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಪ್ರದೀಪ್‌ ಶೆಟ್ಟಿ, ರಾಜೇಶ್‌ ದೇವಾಡಿಗ, ಪ್ರಶಾಂತ ಮೋಗವೀರ ಮತ್ತು ನಾಗರಾಜ ದೊಂಬೆ ಎಂಬ ನಾಲ್ವರು ಆರೋಪಿಗಳು ಒಟ್ಟಾಗಿ ಸೇರಿ ಏಕಾಏಕಿ ದಾಳಿ ನಡೆಸಿದ್ದಾರೆ.
ಆರೋಪಿಗಳು ರಾಘವೇಂದ್ರ ಅವರನ್ನು ಸುತ್ತುವರಿದು, ಕಾಲರ್ ಹಿಡಿದು ಅಡ್ಡಗಟ್ಟಿದ್ದಾರೆ. ಬಳಿಕ ಮುಖ ಹಾಗೂ ಕೆನ್ನೆಗೆ ಕೈಯಿಂದ ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆರೋಪಿಗಳ ಪೈಕಿ ನಾಗರಾಜ ಎಂಬಾತ ತಾನು ಕೈಗೆ ಧರಿಸಿದ್ದ ಗಟ್ಟಿಯಾದ ಲೋಹದ ಬಳೆಯಿಂದ (ಖಡ್ಗ) ಮುಷ್ಟಿ ಕಟ್ಟಿ ರಾಘವೇಂದ್ರ ಅವರ ಬೆನ್ನಿಗೆ ಬಲವಾಗಿ ಗುದ್ದಿ ತೀವ್ರ ಸ್ವರೂಪದ ಆಂತರಿಕ ಗಾಯಗಳನ್ನು ಉಂಟುಮಾಡಿದ್ದಾನೆ.

ಹಲ್ಲೆಯಿಂದ ಗಾಯಗೊಂಡ ರಾಘವೇಂದ್ರ ದೇವಾಡಿಗ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಬಳಿಕ ನೀಡಿದ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026 ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 118(1), 115(2), 126(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.