ಡೈಲಿವಾರ್ತೆ: 16/ಜೂ./2026

ಧರ್ಮಸ್ಥಳ ಪ್ರಕರಣದ ತನಿಖಾಧಿಕಾರಿಗಳ ಕಾರು ಚಾರ್ಮಾಡಿ ಘಾಟಿಯಲ್ಲಿ ಪಲ್ಟಿ: ಎಸ್‌ಐಟಿ ಎಸ್ಪಿ ಸೈಮನ್ ಸೇರಿದಂತೆ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರು!

​ಬೆಳ್ತಂಗಡಿ: ​ಧರ್ಮಸ್ಥಳದ ಶವ ಹೂತ ಪ್ರಕರಣದ ತನಿಖೆಯನ್ನು ಅತ್ಯಂತ ಚುರುಕಾಗಿ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಭೀಕರ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್ ಸೇರಿದಂತೆ ಉನ್ನತ ಅಧಿಕಾರಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಅಲ್ಪದರಲ್ಲೇ ಪಾರಾಗಿದ್ದಾರೆ.

​ಅಪಘಾತದ ವಿವರ:
ಎಸ್‌ಐಟಿ ಮುಖ್ಯಸ್ಥರಾಗಿರುವ ಎಸ್ಪಿ ಸಿ.ಎ. ಸೈಮನ್ ಹಾಗೂ ಇನ್ಸ್‌ಪೆಕ್ಟರ್ ಕುಸುಮಾಧರ್ ಅವರು ಅಧಿಕೃತ ಕಾರ್ಯನಿಮಿತ್ತ ಬೆಳ್ತಂಗಡಿಯಿಂದ ಚಾರ್ಮಾಡಿ ಘಾಟಿ ಮಾರ್ಗವಾಗಿ ಚಿಕ್ಕಮಗಳೂರಿನ ಕಡೆಗೆ ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲೇ ತಲೆಕೆಳಗಾಗಿ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಉಲ್ಟಾ ಆಗಿದ್ದರೂ, ಒಳಗಿದ್ದ ಅಧಿಕಾರಿಗಳು ಮತ್ತು ಚಾಲಕ ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವುದು ಪವಾಡಸದೃಶವಾಗಿದೆ.

​ತನಿಖೆಯ ಪ್ರಗತಿ ಪರಿಶೀಲನೆಗೆ ತೆರಳುತ್ತಿದ್ದ ಅಧಿಕಾರಿಗಳು:

ಈ ಹಿಂದೆ ಎಸ್‌ಐಟಿ ಎಸ್ಪಿಯಾಗಿದ್ದು, ಸದ್ಯ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಸೈಮನ್ ಹಾಗೂ ಕುಸುಮಾಧರ್ ಅವರು ತೆರಳುತ್ತಿದ್ದರು ಎನ್ನಲಾಗಿದೆ. ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯ ಪ್ರಗತಿ ಹಾಗೂ ಪ್ರಮುಖ ಮಾಹಿತಿಗಳ ಕುರಿತು ಚರ್ಚಿಸಲು ಅಧಿಕಾರಿಗಳು ಜಿತೇಂದ್ರ ಕುಮಾರ್ ಅವರ ಬಳಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಗಾಯಾಳುಗಳಿಗೆ ತಕ್ಷಣದ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅಧಿಕಾರಿಗಳು ಸುರಕ್ಷಿತವಾಗಿದ್ದು, ತನಿಖಾ ತಂಡದ ಪ್ರಮುಖರು ದೊಡ್ಡ ಗಂಡಾಂತರದಿಂದ ಪಾರಾಗಿರುವುದು ಇಲಾಖೆಯ ನಿರಾಳತೆಗೆ ಕಾರಣವಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.