ಡೈಲಿವಾರ್ತೆ: 27/ಜು./2026

ಬಸ್‌ ಟೈಮಿಂಗ್ಸ್‌ ವಿವಾದ: ಕಾಪುವಿನಲ್ಲಿ ಉದ್ದೇಶಪೂರ್ವಕವಾಗಿ ಪರಸ್ಪರ ಗುದ್ದಿಕೊಂಡ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು

ಕಾಪು, ಜು. 27: ಪ್ರಯಾಣಿಕರು ತುಂಬಿದ್ದ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಉದ್ದೇಶಪೂರ್ವಕವಾಗಿ ಪರಸ್ಪರ ಗುದ್ದಿಕೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ ಕಾಪು ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಆನಂದ್ ಟ್ರಾವೆಲ್ಸ್ ಮತ್ತು ಸಂದೇಶ್ ಟ್ರಾವೆಲ್ಸ್ ಬಸ್‌ಗಳ ನಡುವೆ ಟೈಮಿಂಗ್ಸ್‌ ವಿಚಾರವಾಗಿ ಉದ್ಯಾವರದಿಂದಲೇ ಎರಡೂ ಬಸ್‌ಗಳ ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.

ಕಾಪು ಬಸ್‌ ನಿಲ್ದಾಣದಲ್ಲಿ ಸಂದೇಶ್ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ, ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.
ಘಟನೆಯ ಬಳಿಕ ಎರಡೂ ಬಸ್‌ಗಳ ಚಾಲಕರು ಹಾಗೂ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆಯಿತು. ಇದರಿಂದ ಕಾಪು ಬಸ್‌ ನಿಲ್ದಾಣದ ಸುತ್ತಮುತ್ತ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ತೊಂದರೆ ಅನುಭವಿಸಿದರು.
ಮಾಹಿತಿ ತಿಳಿದ ಕೂಡಲೇ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ಎರಡೂ ಬಸ್‌ಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಪ್ರಕರಣದ ಕುರಿತು ತನಿಖೆ ನಡೆಸಿದ್ದಾರೆ. ಅಲ್ಲದೆ
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.