ಡೈಲಿವಾರ್ತೆ: 27/ಜು./2026

ಅಮೆರಿಕದ ಸಿಯಾಟಲ್ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಇಬ್ಬರ ದುರ್ಮರಣ, ಐವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತಿದ್ದ ವಾರ್ಷಿಕ ‘ಬೈಟ್ ಆಫ್ ಸಿಯಾಟಲ್’ ಆಹಾರ ಮೇಳದಲ್ಲಿ ಭಾನುವಾರ ನಡೆದ ಸರಣಿ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಸಿಯಾಟಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಈ ಮೇಳದಲ್ಲಿ ನೂರಾರು ಸ್ಥಳೀಯ ಆಹಾರ ಮಳಿಗೆಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾವಿರಾರು ಜನರು ಭಾಗವಹಿಸಿದ್ದರು. ನಗರದ ಪ್ರಸಿದ್ಧ ಸ್ಪೇಸ್ ನೀಡಲ್ ಟವರ್ ಸಮೀಪ ಸ್ಥಳೀಯ ಕಾಲಮಾನ ಸಂಜೆ ಸುಮಾರು 6 ಗಂಟೆ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಮೇಳದ ವಾತಾವರಣ ಕ್ಷಣಾರ್ಧದಲ್ಲಿ ಭಯಭೀತಿಯ ವಾತಾವರಣಕ್ಕೆ ತಿರುಗಿತು.

ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಸಿಯಾಟಲ್ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಪೊಲೀಸರು ಸ್ಥಳವನ್ನು ತಮ್ಮ ವಶಕ್ಕೆ ಪಡೆದು ಭದ್ರತೆಯನ್ನು ಬಿಗಿಗೊಳಿಸಿದ್ದು, ದಾಳಿಯ ಹಿಂದಿನ ಕಾರಣ ಹಾಗೂ ಆರೋಪಿಗಳ ಪತ್ತೆಗೆ ವ್ಯಾಪಕ ತನಿಖೆ ಆರಂಭಿಸಿದ್ದಾರೆ.