ಡೈಲಿವಾರ್ತೆ:20/ಸೆ./2026

ಉಪ್ಪಿನಂಗಡಿ: ದಾಂಪತ್ಯ ಕಲಹಕ್ಕೆ ಕಂದಮ್ಮ ಬಲಿ: ನಾದಿನಿಯ ಮಗು ಬಾವಿಗೆಸೆದು ಕೊಲೆ, ಸ್ವಂತ ಮಗು ಬದುಕಿಸಲು ಹೋರಾಟ

ಉಪ್ಪಿನಂಗಡಿ, ಸೆ.20: ಪತಿ-ಪತ್ನಿ ನಡುವೆ ಫೋನ್‌ನಲ್ಲಿ ನಡೆದ ವೈವಾಹಿಕ ಕಲಹದ ಬಳಿಕ ಮಹಿಳೆಯೊಬ್ಬರು ತನ್ನ ಸ್ವಂತ ಮಗು ಹಾಗೂ ನಾದಿನಿಯ ಮಗುವನ್ನು ಬಾವಿಗೆಸೆದ ಪರಿಣಾಮ ನಾದಿನಿಯ ಮೂರು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಪೆರ್ನೆಯ ಮೈರಕಟ್ಟೆಯಲ್ಲಿ ಸೆ.19ರಂದು ನಡೆದಿದೆ.

ಮೈರಕಟ್ಟೆಯ ಸಿನಾನ್ (32) ಮತ್ತು ನೂರುನ್ನಿಸಾ (28) ದಂಪತಿ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಮೂರೂವರೆ ವರ್ಷದ ಹೆಣ್ಣು ಮಗು ಹಾಗೂ ಪತಿಯ ತಂಗಿಯ ಸುಮಾರು ಮೂರು ವರ್ಷದ ಗಂಡು ಮಗು ರಬೀಹ್‌ನನ್ನು ಮನೆ ಸಮೀಪದ ಬಾವಿಗೆ ಎಸೆದಿದ್ದಾಳೆ ಎನ್ನಲಾಗಿದೆ.

ಘಟನೆ ಗಮನಿಸಿದ ನಾದಿನಿ ಬೊಬ್ಬೆ ಹೊಡೆದಿದ್ದು, ತಕ್ಷಣ ಸ್ಥಳೀಯರು ಹಾಗೂ ಸಮೀಪದ ಹೊಟೇಲ್‌ನವರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಇಬ್ಬರು ಮಕ್ಕಳನ್ನೂ ಬಾವಿಯಿಂದ ಮೇಲಕ್ಕೆತ್ತಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ನೂರುನ್ನಿಸಾಳ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪತಿಯ ತಂಗಿಯ ಮಗು ರಬೀಹ್ ಮೃತಪಟ್ಟಿದೆ.

ಸ್ಥಳೀಯರು ನೀಡಿದ ಮಾಹಿತಿಯಂತೆ, ನೂರುನ್ನಿಸಾ ಮೊದಲು ನಾದಿನಿಯ ಮಗುವನ್ನು ಬಾವಿಗೆ ಎಸೆದಿದ್ದಾಳೆ. ಬಳಿಕ ತನ್ನ ಮಗುವನ್ನೂ ಬಾವಿಗೆ ಎಸೆಯಲು ಮುಂದಾಗಿದ್ದ ವೇಳೆ ಸ್ಥಳೀಯರು ಧಾವಿಸಿ ಆಕೆಯ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ರಕ್ಷಿಸಿದ್ದಾರೆ ಎನ್ನಲಾಗಿದೆ.
ನೂರುನ್ನಿಸಾಳ ಪತಿ ಸಿನಾನ್ ಮಂಗಳೂರಿನಲ್ಲಿ ಗ್ಯಾರೇಜ್ ನಡೆಸುತ್ತಿದ್ದು, ಘಟನೆ ನಡೆದ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿದ್ದರು ಎನ್ನಲಾಗಿದೆ. ಸಿನಾನ್ ಅವರ ತಂಗಿಯ ಪತಿ ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಆಕೆ ತನ್ನ ಮಗುವಿನೊಂದಿಗೆ ಸಹೋದರ ಸಿನಾನ್ ಅವರ ಮನೆಯಲ್ಲೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಪತಿ-ಪತ್ನಿ ಈ ಹಿಂದೆ ಅನ್ಯೋನ್ಯವಾಗಿಯೇ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಸೆ.19ರಂದು ಏಕಾಏಕಿ ನಡೆದ ಈ ಘಟನೆ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯಲ್ಲಿದ್ದ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಪರಿಸ್ಥಿತಿಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.