


ಡೈಲಿವಾರ್ತೆ:21/ಸೆ./2026

ಭದ್ರಾವತಿ: ಗಣೇಶ ವಿಸರ್ಜನೆ ವೇಳೆ ದುರಂತ: ಕೆರೆಯಲ್ಲಿ ಮುಳುಗಿ 20ರ ಯುವಕ ಸಾವು

ಶಿವಮೊಗ್ಗ: ಜಿಲ್ಲಾಡಳಿತದ ಎಚ್ಚರಿಕೆ ಹಾಗೂ ಗಣೇಶ ವಿಸರ್ಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳ ನಡುವೆಯೇ ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಪದವಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನು ಭದ್ರಾವತಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್ (20) ಎಂದು ಗುರುತಿಸಲಾಗಿದೆ.
ಭದ್ರಾವತಿ ತಾಲೂಕಿನ ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ರಾಕೇಶ್ ಭಾಗವಹಿಸಿದ್ದರು.
ಭಾನುವಾರ ಸಂಜೆ ಆರಂಭಗೊಂಡಿದ್ದ ಮೆರವಣಿಗೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ದೇವರಹಳ್ಳಿ ಕೆರೆ ಬಳಿ ತಲುಪಿತ್ತು. ಈ ವೇಳೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಯತಪ್ಪಿದ ರಾಕೇಶ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಶೋಧ ಕಾರ್ಯ ಆರಂಭಿಸಿ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಾತ್ರಿಯಿಡೀ ಕೆರೆಯಲ್ಲಿ ಶೋಧ ನಡೆಸಿದರು. ಆದರೆ ಕೆರೆಯಲ್ಲಿ ಗಿಡ-ಗಂಟಿ ಹಾಗೂ ಹುಲ್ಲು ಹೆಚ್ಚಾಗಿ ಬೆಳೆದಿದ್ದರಿಂದ ಶೋಧ ಕಾರ್ಯಕ್ಕೆ ತೀವ್ರ ಅಡ್ಡಿಯಾಯಿತು.
ನಿರಂತರ ಶೋಧ ಕಾರ್ಯದ ಬಳಿಕ ಸೋಮವಾರ ಬೆಳಗ್ಗೆ ರಾಕೇಶ್ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.