ಡೈಲಿವಾರ್ತೆ:25/ಸೆ./2026

ದೆಂದೂರು ಕಟ್ಟೆ: ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್‌ಗೆ ಬೆಂಕಿ – ತಪ್ಪಿದ ಭಾರೀ ಅನಾಹುತ

ಉಡುಪಿ: ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರು ಕಟ್ಟೆ ಬಳಿ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಲಾಗಿದ್ದ ಬಸ್‌ಗೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್‌ನ ಸಮೀಪವೇ ಮತ್ತೆರಡು ಬಸ್‌ಗಳು ಹಾಗೂ ಟೆಂಪೋವೊಂದನ್ನು ನಿಲ್ಲಿಸಲಾಗಿತ್ತು. ಅಲ್ಲದೆ, ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದ ಕಾರಣ ಬೆಂಕಿ ಇತರ ವಾಹನಗಳಿಗೆ ಅಥವಾ ಪಂಪ್‌ಗೆ ವ್ಯಾಪಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ನಿಯಂತ್ರಿಸಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಕಿ ಅವಘಡದಿಂದ ಬಸ್‌ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಪೆಟ್ರೋಲ್ ಪಂಪ್ ಮಾಲೀಕರು ಹಾಗೂ ಬಸ್ ಮಾಲೀಕರು ಒಬ್ಬರೇ ಎಂದು ತಿಳಿದುಬಂದಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.