ಡೈಲಿವಾರ್ತೆ:25/ಸೆ./2026

ಖಾಲಿ ಸೈಟ್ ಸ್ವಚ್ಛಗೊಳಿಸುವ ವೇಳೆ ಬಯಲಾಯ್ತು ಪತ್ನಿಯ ಭೀಕರ ಕೊಲೆ ರಹಸ್ಯ: ಪತಿಯ ಬಂಧನ!

ಬೆಂಗಳೂರು: ಖಾಲಿ ಸೈಟ್ ಸ್ವಚ್ಛಗೊಳಿಸುವ ಸರ್ಕಾರದ ನಿಯಮವೇ ಭೀಕರ ಕೊಲೆ ಪ್ರಕರಣವೊಂದನ್ನು ಬಯಲಿಗೆಳೆದಿದ್ದು, ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಖಾಲಿ ಜಾಗದಲ್ಲಿ ಎಸೆದಿದ್ದ ಆರೋಪದ ಮೇಲೆ ಪತಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಬಂಧಿತ ಆರೋಪಿ. ಆತನ ಪತ್ನಿ ಅನುಸೂಯ (28) ಕೊಲೆಯಾದವರು. ದಂಪತಿ ಪ್ರೀತಿಸಿ ವಿವಾಹವಾಗಿದ್ದು, ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಆಗಸ್ಟ್ 11ರಂದು ಹಣಕಾಸಿನ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸಾಗರ್ ಚಂದ್ರ ರಾವತ್ ಪತ್ನಿ ಅನುಸೂಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸುಮಾರು ಮೂರು ದಿನಗಳ ಕಾಲ ಮನೆಯಲ್ಲೇ ಶವದೊಂದಿಗೆ ಇದ್ದ ಆರೋಪಿ, ನಂತರ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ಗೆ ಕೊಂಡೊಯ್ದು ಎಸೆದಿದ್ದಾನೆ ಎನ್ನಲಾಗಿದೆ.

ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ನಲ್ಲಿ ಶವ ಎಸೆಯಲಾಗಿತ್ತು. ಸೈಟ್ ಸ್ವಚ್ಛಗೊಳಿಸಲು ಮಾಲೀಕರು ಕಾರ್ಮಿಕರನ್ನು ಕಳುಹಿಸಿದಾಗ, ಅಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳು ಕಚ್ಚಿ ತಿಂದಿದ್ದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಮಾಹಿತಿ ಪಡೆದ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಶವದ ಮೇಲಿದ್ದ ಬಟ್ಟೆಯೊಂದರ ಮಾಲ್‌ನ ಟ್ಯಾಗ್ ಪೊಲೀಸರಿಗೆ ಪ್ರಮುಖ ಸುಳಿವಾಗಿ ದೊರೆತಿತ್ತು. ಟ್ಯಾಗ್ ಆಧರಿಸಿ ಸಂಬಂಧಪಟ್ಟ ಮಾಲ್‌ನಿಂದ ಬಿಲ್‌ ಪಡೆಯಲಾಗಿದ್ದು, ಅದರಲ್ಲಿದ್ದ ವಿವರಗಳ ಆಧಾರದ ಮೇಲೆ ಮೃತ ಮಹಿಳೆಯ ಗುರುತು ಪತ್ತೆಹಚ್ಚಲಾಯಿತು.
ನಂತರ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಕೊಲೆ ನಡೆದ ಸುಮಾರು 20 ದಿನಗಳ ಬಳಿಕ ಆರೋಪಿ ಪತಿ ಸಾಗರ್ ಚಂದ್ರ ರಾವತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.