ಡೈಲಿವಾರ್ತೆ:28/ಸೆ./2026

ಬ್ರಹ್ಮಾವರ: ಹೆತ್ತ ತಾಯಿಯನ್ನೇ ಅಪರಿಚಿತ ಸ್ಥಳದಲ್ಲಿ ಬಿಟ್ಟು ಪರಾರಿಯಾದ ಮಗ: 70ರ ವೃದ್ಧೆ ಕಣ್ಣೀರಿನಲ್ಲಿ ಹೇಳಿಕೊಂಡ ಕರಾಳ ಕಥೆ

ಬ್ರಹ್ಮಾವರ: ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ ಎನ್ನಲಾಗಿದ್ದು, ದಿಕ್ಕು ತೋಚದೆ ಪರದಾಡುತ್ತಿದ್ದ 70 ವರ್ಷದ ವೃದ್ಧೆಯನ್ನು ಸಮಾಜಸೇವಕ ಹಾಗೂ ಪೊಲೀಸ್ ಸಿಬ್ಬಂದಿ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.

ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೇಣೈ ಅವರು ಗಮನಿಸಿದ್ದಾರೆ. ಕೂಡಲೇ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್‌ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಸುರಕ್ಷಿತವಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.

ಕಣ್ಣೀರಿಟ್ಟ ವೃದ್ಧೆ
ಆಸ್ಪತ್ರೆಯ ದಾಖಲಾತಿ ವೇಳೆ ವೃದ್ಧೆ ತಮ್ಮ ಹೆಸರು ಸರಸ್ವತಿ (70) ಹಾಗೂ ತಮಿಳುನಾಡಿನ ತಿರುವಳ್ಳೂವೂರು ನಿವಾಸಿ ಎಂದು ತಿಳಿಸಿದ್ದಾರೆ. ತಮ್ಮ ಸ್ವಂತ ಮಗನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.

ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಬ್ರಹ್ಮಾವರ ಮಹಿಳಾ ಪೊಲೀಸ್‌ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ವೃದ್ಧೆಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲನೆ ನಡೆಯಬೇಕಿದ್ದು, ಆಕೆಯ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.