


ಡೈಲಿವಾರ್ತೆ:28/ಸೆ./2026

ಶ್ರೀಮಂತ ಯುವಕರೇ ಟಾರ್ಗೆಟ್: ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆ – ದಾವಣಗೆರೆಯಲ್ಲಿ ವಿದ್ಯಾರ್ಥಿಗಳ ‘ಖತರ್ನಾಕ್’ ಗ್ಯಾಂಗ್ ಬಲೆಗೆ

ದಾವಣಗೆರೆ: ಶ್ರೀಮಂತ ಯುವಕರನ್ನು ಟಾರ್ಗೆಟ್ ಮಾಡಿ ಅಪಹರಿಸಿ, ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ 10 ಮಂದಿಯನ್ನು ದಾವಣಗೆರೆ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸೇರಿದ್ದಾರೆ.
ದಾವಣಗೆರೆಯ ಬಟ್ಟೆ ವ್ಯಾಪಾರಿಯೊಬ್ಬರನ್ನು ಅಪಹರಿಸಿ, ಆಂಜನೇಯ ಬಡಾವಣೆಯ ಮನೆಯೊಂದರಲ್ಲಿ ಕೂಡಿ ಹಾಕಿ ಮರದ ತುಂಡು ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ₹10 ಲಕ್ಷ ಹಣ ತರುವಂತೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬಟ್ಟೆ ವ್ಯಾಪಾರಿಯ ಸ್ನೇಹಿತ ಅಬ್ಬಾಸ್ ಎಂಬಾತ ಹಣಕಾಸಿನ ವ್ಯವಹಾರದ ಬಗ್ಗೆ ಮಾತನಾಡುವುದಿದೆ, ಬಾ ಎಂದು ಹೇಳಿ 26 ವರ್ಷದ ಯುವಕನನ್ನು ಶಾಮನೂರು ಬಳಿಯ ಸಮುದಾಯ ಭವನದ ಬಳಿ ಕರೆಸಿಕೊಂಡಿದ್ದ ಎನ್ನಲಾಗಿದೆ. ಅಲ್ಲಿಗೆ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಯುವಕನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಆಂಜನೇಯ ಬಡಾವಣೆಯ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.
ನಂತರ ಆರೋಪಿಗಳು ಬಟ್ಟೆ ವ್ಯಾಪಾರಿ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ನಿಮ್ಮ ತಂದೆಗೆ ಕರೆ ಮಾಡಿ ₹10 ಲಕ್ಷ ಹಣ ತರಿಸದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ನಡುವೆ ಬಟ್ಟೆ ವ್ಯಾಪಾರಿ ಪ್ರತಿದಿನ ತಮ್ಮ ಕುಟುಂಬದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮೊಬೈಲ್‌ನ ಲೈವ್ ಲೊಕೇಷನ್ ಹಂಚಿಕೊಳ್ಳುತ್ತಿದ್ದ ವಿಚಾರ ಪೊಲೀಸರಿಗೆ ನೆರವಾಯಿತು. ಲೈವ್ ಲೊಕೇಷನ್ ಆಧರಿಸಿ ಕುಟುಂಬಸ್ಥರು ಹಾಗೂ ಇತರರು ಆಂಜನೇಯ ಬಡಾವಣೆಯಲ್ಲಿ ಹುಡುಕಾಟ ಆರಂಭಿಸಿದ್ದರು. ಜನರು ಸ್ಥಳದಲ್ಲಿ ಜಮಾಯಿಸುತ್ತಿರುವುದನ್ನು ಗಮನಿಸಿದ ಆರೋಪಿಗಳು, ಬಟ್ಟೆ ವ್ಯಾಪಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಬಟ್ಟೆ ವ್ಯಾಪಾರಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳಿಂದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಗಂಗಾರಾಮ ಪವಾರ್ ಅಲಿಯಾಸ್ ಬಬ್ಲು ಕೂಡ ಸೇರಿದ್ದಾನೆ. ಈತನ ವಿರುದ್ಧ ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳೇ ಸೇರಿಕೊಂಡು ಯುವಕರನ್ನು ಗುರಿಯಾಗಿಸಿಕೊಂಡು ಅಪಹರಣ, ಹಲ್ಲೆ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಇದೀಗ ದಾವಣಗೆರೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.