


ಡೈಲಿವಾರ್ತೆ:29/ಸೆ./2026

ಮಲ್ಲೇಶ್ವರಂನಲ್ಲಿ ಧರೆಗುರುಳಿದ ಬೃಹತ್ ಮರ: ಮೂರು ವಾಹನಗಳು ಜಖಂ – ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಬೆಂಗಳೂರು, ಸೆ.29: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಮುಂಭಾಗ ಬೃಹತ್ ಮರವೊಂದು ಧರೆಗುರುಳಿದ್ದು, ಮೂರು ವಾಹನಗಳು ಜಖಂಗೊಂಡಿರುವ ಘಟನೆ ನಡೆದಿದೆ.

ಮರ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಪರಿಣಾಮ, ಒಂದು ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಗ್ಯಾಸ್ ಆಟೋ ಹಾಗೂ ದ್ವಿಚಕ್ರ ವಾಹನವೂ ಹಾನಿಗೊಳಗಾಗಿದೆ. ಮರದ ಕೊಂಬೆಗಳು ವಾಹನಗಳ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು.
ತಕ್ಷಣ ಸ್ಥಳಕ್ಕೆ ಜಿಬಿಎ ಸಿಬ್ಬಂದಿ ಆಗಮಿಸಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ಬಿದ್ದ ಪರಿಣಾಮ ಜಖಂಗೊಂಡ ಕಾರಿನ ಮಾಲೀಕ ವಿನೋದ್ ಕುಮಾರ್ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಸಾಮಾನ್ಯವಾಗಿ ರಾತ್ರಿ ಕಾರಿನಲ್ಲೇ ಮಲಗುತ್ತೇನೆ. ಸೆ.28ರಂದು ಇಲ್ಲಿ ಸಾವು ಸಂಭವಿಸಿದ್ದ ಹಿನ್ನೆಲೆಯಲ್ಲಿ ಕಾರನ್ನು ನಿಲ್ಲಿಸಿ ಹೋಗಿದ್ದೆ. ಒಂದು ವೇಳೆ ಕಾರಿನಲ್ಲೇ ಮಲಗಿದ್ದರೆ ನನ್ನ ಗತಿಯೇನು? ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ, ರಸ್ತೆ ಕಾಮಗಾರಿಗಾಗಿ ಈ ಭಾಗದಲ್ಲಿ ಅಗೆದಿದ್ದರಿಂದ ಮರದ ಬುಡ ಸಡಿಲಗೊಂಡಿತ್ತು. ಇದರಿಂದಲೇ ಮರ ಉರುಳಿಬಿದ್ದಿದೆ ಎಂದು ಆರೋಪಿಸಿರುವ ವಿನೋದ್ ಕುಮಾರ್ ಘಟನೆಗೆ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ರಸ್ತೆಬದಿಯ ಮರಗಳ ಸುರಕ್ಷತೆ ಹಾಗೂ ರಸ್ತೆ ಕಾಮಗಾರಿಗಳ ವೇಳೆ ಮರಗಳ ಬುಡದ ಸ್ಥಿರತೆ ಕಾಪಾಡುವ ಕುರಿತು ಸಂಬಂಧಪಟ್ಟ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.