


ಡೈಲಿವಾರ್ತೆ:29/ಸೆ./2026

ಮಲ್ಪೆಯಲ್ಲಿ ನಿಗೂಢ ಕೊಲೆ: ಪ್ರತಿದಿನ ಮಲಗುತ್ತಿದ್ದ ಸ್ಥಳದಲ್ಲೇ ಆಂಧ್ರ ಮೂಲದ ವ್ಯಕ್ತಿ ಹತ್ಯೆ!

ಮಲ್ಪೆ, ಸೆ.29: ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ಮಲ್ಪೆಯಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತರನ್ನು ಆಂಧ್ರಪ್ರದೇಶ ಮೂಲದ ಪರಮೇಶ್ ಎಂದು ಗುರುತಿಸಲಾಗಿದೆ.
ಮಲ್ಪೆ ಭಾಗದಲ್ಲಿ ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಪರಮೇಶ್, ಪ್ರತಿದಿನ ಮಲಗುತ್ತಿದ್ದ ಸ್ಥಳದಲ್ಲೇ ಕೊಲೆಯಾಗಿರುವುದು ಪತ್ತೆಯಾಗಿದೆ.
ಬೆಳಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಮಾಹಿತಿ ಪಡೆದ ಮಲ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪರಿಶೀಲಿಸಿ, ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ.
ಪರಮೇಶ್ ಕೊಲೆಗೆ ನಿಖರ ಕಾರಣವೇನು, ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಕುರಿತು ಮಲ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ಬಹಿರಂಗವಾಗಬೇಕಿದೆ.