ಡೈಲಿವಾರ್ತೆ:29/ಸೆ./2026

ರೇಣುಕಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ‘ಡಿ’ ಗ್ಯಾಂಗ್‌ನ ಕರಾಳ ಕೃತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ!

ಬೆಂಗಳೂರು, ಸೆ.29: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೋಷ್ ರಾವ್ ಅವರ ಹೇಳಿಕೆಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ಇನ್‌ಕ್ಯಾಮೆರಾ ಪ್ರಕ್ರಿಯೆ ಮೂಲಕ ದಾಖಲಿಸಿಕೊಳ್ಳಲಾಯಿತು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಪ್ರದೋಷ್ ರಾವ್ ನೀಡಿದ ಹೇಳಿಕೆಯನ್ನು ಸಂಪೂರ್ಣವಾಗಿ ವಿಡಿಯೋ ದಾಖಲಿಸಿಕೊಳ್ಳಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ದರ್ಶನ್ ಸೇರಿದಂತೆ ಇತರ ಆರೋಪಿಗಳ ಸಮ್ಮುಖದಲ್ಲೇ ಅವರ ಹೇಳಿಕೆ ದಾಖಲಾಗಿದೆ.

ರೇಣುಕಸ್ವಾಮಿ ಹತ್ಯೆಗೂ ಮುನ್ನ ಮತ್ತು ಬಳಿಕ ನಡೆದ ಘಟನೆಗಳ ಕುರಿತು ಪ್ರದೋಷ್ ನ್ಯಾಯಾಲಯದ ಮುಂದೆ ಹಲವು ವಿವರಗಳನ್ನು ನೀಡಿರುವುದಾಗಿ ತಿಳಿದುಬಂದಿದೆ. ದರ್ಶನ್ ಅವರ ಪರಿಚಯವಾದ ಸಂದರ್ಭದಿಂದ ಆರಂಭಿಸಿ ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆಗಳು ಹಾಗೂ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಚರಂಡಿ ಬಳಿಗೆ ಸಾಗಿಸಿ ಬಿಸಾಡಿದ ವಿಚಾರದವರೆಗೆ ಘಟನೆಗಳ ಸರಣಿಯನ್ನು ವಿವರಿಸಿರುವುದಾಗಿ ಮೂಲಗಳು ತಿಳಿಸಿವೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಮೇಲೆ ನಡೆದ ಹಲ್ಲೆ, ಆರೋಪಿಗಳಿಂದ ನಡೆದ ದೌರ್ಜನ್ಯ ಹಾಗೂ ರೇಣುಕಸ್ವಾಮಿ ಕ್ಷಮೆ ಕೋರಿ ಅಂಗಲಾಚಿದ ಸಂದರ್ಭದ ಬಗ್ಗೆಯೂ ಪ್ರದೋಷ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರೇಣುಕಸ್ವಾಮಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದು, ದರ್ಶನ್ ಸೇರಿದಂತೆ ಕೆಲ ಆರೋಪಿಗಳು ಅಮಾನವೀಯವಾಗಿ ವರ್ತಿಸಿದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಎರಡನೇ ಆರೋಪಿ ದರ್ಶನ್, ಪವನ್ ಸೇರಿದಂತೆ ನಾಗರಾಜ್, ನಂದೀಶ್ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತೂ ಪ್ರದೋಷ್ ವಿವರಿಸಿರುವುದಾಗಿ ಮೂಲಗಳು ಹೇಳಿವೆ.

ಪ್ರದೋಷ್ ರಾವ್ ಅವರ ಮಾಫಿ ಸಾಕ್ಷಿ ಹೇಳಿಕೆ ಇನ್ನೂ ಪೂರ್ಣಗೊಂಡಿಲ್ಲ. ಮಂಗಳವಾರವೂ ನ್ಯಾಯಾಲಯದಲ್ಲಿ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಪ್ರಕರಣದ ತನಿಖೆ ಹಾಗೂ ವಿಚಾರಣೆಯ ದೃಷ್ಟಿಯಿಂದ ಪ್ರದೋಷ್ ನೀಡುತ್ತಿರುವ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.