


ಡೈಲಿವಾರ್ತೆ:29/ಸೆ./2026

ಮಂಗಳೂರು: ಗೂಡ್ಸ್ ಆಟೋ ರಿಕ್ಷಾಕ್ಕೆ ನ್ಯಾಯಾಧೀಶರ ಕಾರು ಡಿಕ್ಕಿ: ಆಟೋ ಚಾಲಕ ಗಂಭೀರ ಗಾಯ

ಮಂಗಳೂರು, ಸೆ.29: ಕರಂಗಲ್ಪಾಡಿಯಿಂದ ನ್ಯಾಯಾಲಯದತ್ತ ತೆರಳುವ ರಸ್ತೆಯ ತಿರುವಿನಲ್ಲಿ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಸೇರಿದಂತೆ ಹಲವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮಂಜೇಶ್ವರ–ಹೊಸಂಗಡಿ ನಿವಾಸಿ ಚಂದ್ರ (55) ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ.
ಕೋರ್ಟ್ ಕಡೆಯಿಂದ ಕೆಳಭಾಗಕ್ಕೆ ಗೂಡ್ಸ್ ಆಟೋ ಬರುತ್ತಿದ್ದ ವೇಳೆ, ನ್ಯಾಯಾಲಯದ ರಸ್ತೆಯತ್ತ ಕಾರು ತಿರುವು ಪಡೆಯುತ್ತಿದ್ದ ಸಂದರ್ಭ ಎರಡೂ ವಾಹನಗಳು ಪರಸ್ಪರ ಡಿಕ್ಕಿಯಾಗಿವೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ಆಟೋ ಪಲ್ಟಿಯಾಗಿ ರಸ್ತೆಯಲ್ಲಿ ಉರುಳಿ, ಸಮೀಪದಲ್ಲಿದ್ದ ಸ್ಕೂಟರ್ ಮೇಲೆ ಬಿದ್ದಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದವರಿಗೂ ತೀವ್ರ ಗಾಯಗಳಾಗಿವೆ.
ಅಪಘಾತದಲ್ಲಿ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಕಾರು ಚಾಲಕನ ಕೈಗೂ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಬೆಳಗ್ಗೆ 10.30ರ ಸುಮಾರಿಗೆ ಕರ್ತವ್ಯಕ್ಕೆ ಕೋರ್ಟ್‌ಗೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ.