


ಡೈಲಿವಾರ್ತೆ:29/ಸೆ./2026

ಉಡ ಬೇಟೆ ಆರೋಪ: ತಂದೆ,ಮಗನ ಬಂಧನ!

ಯಲ್ಲಾಪುರ: ವನ್ಯಜೀವಿ ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಂದೆ, ಮಗನನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ನಡೆದಿದೆ.
ಕಣ್ಣಿಗೇರಿ ಗ್ರಾಮದ ಇನಾಸ್ ಬಸ್ಥ್ಯಾಂವ್ ಸಿದ್ದಿ ಹಾಗೂ ಅವರ ಪುತ್ರ ಪ್ರಕಾಶ್ ಇನಾಸ್ ಸಿದ್ದಿ ಬಂಧಿತರು.
ಉಡಗಳನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಎರಡು ಮೃತಪಟ್ಟ ಉಡಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಇಬ್ಬರನ್ನೂ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದೆ.
ವನ್ಯಜೀವಿಗಳ ಬೇಟೆ ಹಾಗೂ ಅಕ್ರಮವಾಗಿ ವನ್ಯಜೀವಿಗಳನ್ನು ಹಿಡಿಯುವ ಚಟುವಟಿಕೆಗಳ ವಿರುದ್ಧ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.