ಡೈಲಿವಾರ್ತೆ:29/ಸೆ./2026

ಉಡುಪಿಯಲ್ಲಿ ಬಸ್‌ ಕಳ್ಳತನ: ರಾತ್ರಿ ನಿಲ್ಲಿಸಿದ್ದ ಶ್ರೀದುರ್ಗಾಂಬ ಬಸ್‌ ಬೆಳಗ್ಗೆ ನಾಪತ್ತೆ – ದೂರು ದಾಖಲು

ಉಡುಪಿ, ಸೆ.29: ಪೆಟ್ರೋಲ್ ಬಂಕ್ ಹಿಂಬದಿಯಲ್ಲಿ ನಿಲ್ಲಿಸಿದ್ದ ಶ್ರೀದುರ್ಗಾಂಬ ಬಸ್‌ನ್ನು ಅಪರಿಚಿತರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಕಟ್‌ಬೆಲ್ತೂರು ಕುಂದಾಪುರ ನಿವಾಸಿ ಕೃಷ್ಣ (51) ಅವರು ಶ್ರೀದುರ್ಗಾಂಬ ಬಸ್‌ನ ನಿರ್ವಾಹಕರಾಗಿದ್ದು, ರಾಯಿನ್ ಉಚ್ಚಿಲ ಚಾಲಕರಾಗಿದ್ದಾರೆ. KA-20-AD-1931 ನೋಂದಣಿ ಸಂಖ್ಯೆಯ ಬಸ್‌ನ್ನು ಸೆ.28ರಂದು ರಾತ್ರಿ 9:48ರ ಸುಮಾರಿಗೆ ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಕೃಷ್ಣ ಅವರು ಚಾಲಕ ರಾಯಿನ್ ಅವರೊಂದಿಗೆ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು.

ಸೆ.29ರಂದು ಬೆಳಗ್ಗೆ ಎಂದಿನಂತೆ ಹನುಮಾನ್ ಪೆಟ್ರೋಲ್ ಬಂಕ್‌ಗೆ ಆಗಮಿಸಿದಾಗ ಬಸ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಸ್ಥಳದಲ್ಲಿ ನಿಲ್ಲಿಸಿದ್ದ ಬಸ್‌ನ್ನು ಅಪರಿಚಿತ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.