ಡೈಲಿವಾರ್ತೆ:29/ಸೆ./2026

ಪತ್ನಿಗೆ ವಿಷದ ಇಂಜೆಕ್ಷನ್ ಆರೋಪ: ಪ್ರೇಮಿಯೊಂದಿಗೆ ಪರಾರಿ – ಕೊಲ್ಲೂರು ಕಾಡಿನಲ್ಲಿ ಜೋಡಿಯ ಶವ ಪತ್ತೆ!

ಕುಂದಾಪುರ: ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿಸಿ ಹತ್ಯೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಆಟೋ ಚಾಲಕನೊಬ್ಬ ತನ್ನ ಪ್ರೇಮಿಯೊಂದಿಗೆ ದಟ್ಟಾರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಾಲ್ಕಲ್ ಸಮೀಪದ ಚಾರ್ಸಾಲ್‌ನಲ್ಲಿ ಬೆಳಕಿಗೆ ಬಂದಿದೆ.

ಮೃತರನ್ನು ಚಾರ್ಸಾಲ್ ನಿವಾಸಿ ಹಾಗೂ ಕೊಲ್ಲೂರು ಆಟೋ ನಿಲ್ದಾಣದ ರಿಕ್ಷಾ ಚಾಲಕ ವಿಠಲ ನಾಯ್ಕ್ ಮತ್ತು ಹೊಸೂರು ಗ್ರಾಮದ ದರುಕೋಡು ನಿವಾಸಿ, ಟೈಲರ್ ವೃತ್ತಿಯ ಭವ್ಯ ಸಮಗಾರ್ತಿ ಎಂದು ಗುರುತಿಸಲಾಗಿದೆ.

ವಿಠಲ ನಾಯ್ಕ್ ವಿವಾಹಿತನಾಗಿದ್ದು, ಗರ್ಭಿಣಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸಿಸುತ್ತಿದ್ದ. ಈ ನಡುವೆ ಟೈಲರ್ ವೃತ್ತಿ ಮಾಡಿಕೊಂಡಿದ್ದ ಭವ್ಯ ಸಮಗಾರ್ತಿಯೊಂದಿಗೆ ಆತನಿಗೆ ಪರಿಚಯವಾಗಿದ್ದು, ಬಳಿಕ ಅದು ಆತ್ಮೀಯ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಪತ್ನಿಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಠಲ ನಾಯ್ಕ್ ತನ್ನ ಪತ್ನಿಗೆ ಭವ್ಯಳನ್ನು ನರ್ಸ್ ಎಂದು ಪರಿಚಯಿಸಿದ್ದ ಎನ್ನಲಾಗಿದ್ದು, ಬಳಿಕ ಆಕೆಯ ಮೂಲಕ ವಿಷಕಾರಿ ದ್ರವ್ಯವಿದ್ದ ಸಿರಿಂಜ್ ಅನ್ನು ಪತ್ನಿಗೆ ಚುಚ್ಚಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇದರಿಂದ ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಠಲ ನಾಯ್ಕ್ ಹಾಗೂ ಭವ್ಯ ಇಬ್ಬರೂ ಮೈಸೂರಿಗೆ ಪರಾರಿಯಾಗಿದ್ದರು ಎನ್ನಲಾಗಿದೆ.
ನಂತರ ಇಬ್ಬರೂ ಕೊಲ್ಲೂರು ಭಾಗಕ್ಕೆ ಮರಳಿದ್ದು, ಹಾಲ್ಕಲ್ ಸಮೀಪದ ಚಾರ್ಸಾಲ್‌ನ ದಟ್ಟ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 15 ದಿನಗಳ ಹಿಂದೆಯೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ದೇಹಗಳು ಕೊಳೆತು ಗುರುತು ಪತ್ತೆಹಚ್ಚಲು ಕಷ್ಟವಾಗುವ ಸ್ಥಿತಿಯಲ್ಲಿದ್ದವು ಎನ್ನಲಾಗಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಹಾಗೂ ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿದ ಆರೋಪದ ಹಿಂದಿನ ವಾಸ್ತವಾಂಶಗಳೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.