ಡೈಲಿವಾರ್ತೆ:29/ಸೆ./2026

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತ್ಯು!

ಉಡುಪಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಹಿರ್ಗಾನ ಗ್ರಾಮದ ಹೆರ್ಮುಂಡೆ ಸಮೀಪ ಸಂಭವಿಸಿದೆ.

ಮೃತರನ್ನು ಹಿರ್ಗಾನ ನಿವಾಸಿಗಳಾದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ.

ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿ.ಮೀ. ದುರ್ಗಮ ಪ್ರದೇಶದ ಕಾಲುದಾರಿಯಲ್ಲಿ ನಡೆದು ಸುವರ್ಣ ನದಿಯತ್ತ ತೆರಳಿದ್ದರು. ನದಿಯಲ್ಲಿ ಈಜುತ್ತಿದ್ದ ವೇಳೆ ಆಳವಾದ ಪ್ರದೇಶಕ್ಕೆ ತೆರಳಿದ ಭರತ್ ಹಾಗೂ ಹರ್ಷನ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ನೇಹಿತರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ವಾಹನ ಸಂಚಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಿ ಘಟನಾ ಸ್ಥಳ ತಲುಪಿದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಸತತ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ನದಿಯಿಂದ ಮೇಲಕ್ಕೆತ್ತಲಾಯಿತು.

ಠಾಣಾಧಿಕಾರಿ ಸಂಜೀವ ದೇವಾಡಿಗ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಗೃಹ ಪ್ರವೇಶದ ಕನಸು ಕಂಡಿದ್ದ ಭರತ್‌ಗೆ ದುರಂತದ ಹೊಡೆತ:
ಮೃತ ಭರತ್ ಪೂಜಾರಿ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಅವರು, ಮನೆ ಕಾಮಗಾರಿಯನ್ನು ಆರಂಭಿಸಿ ಸ್ಲಾಬ್ ಹಂತದವರೆಗೆ ಪೂರ್ಣಗೊಳಿಸಿದ್ದರು. ಶೀಘ್ರದಲ್ಲೇ ಹೊಸ ಮನೆಯಲ್ಲಿ ಗೃಹ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದ ಭರತ್‌ರನ್ನು ದಿಢೀರ್ ಸಂಭವಿಸಿದ ಜಲ ದುರಂತ ಬಲಿ ಪಡೆದಿರುವುದು ಕುಟುಂಬಸ್ಥರನ್ನು ಆಘಾತ ಹಾಗೂ ಶೋಕದಲ್ಲಿ ಮುಳುಗಿಸಿದೆ.
ಸ್ನೇಹಿತರೊಂದಿಗೆ ಸಂತಸದ ಕ್ಷಣ ಕಳೆಯಲು ತೆರಳಿದ್ದ ಇಬ್ಬರು ಯುವಕರು ಮರಳಿ ಬಾರದಿರುವುದು ಸ್ಥಳೀಯರಲ್ಲಿಯೂ ತೀವ್ರ ವಿಷಾದಕ್ಕೆ ಕಾರಣವಾಗಿದೆ.