


ಡೈಲಿವಾರ್ತೆ:30/ಸೆ./2026

ಉಡುಪಿ: ಖಾಸಗಿ ಬಸ್ ಕಳವು ಪ್ರಕರಣ: ಕೆಲವೇ ಗಂಟೆಗಳಲ್ಲಿ ಪತ್ತೆ!
ಇಬ್ಬರು ಅಪರಿಚಿತರಿಂದ ಕೃತ್ಯ; ಆರೋಪಿಗಳಿಗಾಗಿ ಪೊಲೀಸರ ಶೋಧ

ಉಡುಪಿ: ನಗರದ ಚಿತ್ಪಾಡಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದ ಗ್ಯಾರೇಜ್ ಬಳಿ ನಿಲ್ಲಿಸಲಾಗಿದ್ದ ಸುಮಾರು ₹40 ಲಕ್ಷ ಮೌಲ್ಯದ ಖಾಸಗಿ ಬಸ್‌ವೊಂದನ್ನು ಕಳವು ಮಾಡಿದ್ದ ಪ್ರಕರಣವನ್ನು ಉಡುಪಿ ನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಕಳವಾದ ಬಸ್ ಮುದರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ನಿವಾಸಿ ಕೃಷ್ಣ (51) ಅವರು ಶ್ರೀದುರ್ಗಾಂಬ ಬಸ್‌ನ ನಿರ್ವಾಹಕರಾಗಿದ್ದು, ಸೆ.28ರ ರಾತ್ರಿ ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಬಸ್‌ನ್ನು ಚಿತ್ಪಾಡಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಗ್ಯಾರೇಜ್ ಬಳಿ ನಿಲ್ಲಿಸಿದ್ದರು. ಬಳಿಕ ರಾತ್ರಿ ಸುಮಾರು 10 ಗಂಟೆಗೆ ಇಬ್ಬರೂ ಅಲ್ಲಿಂದ ತೆರಳಿದ್ದರು.
ಸೆ.29ರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಲು ಸ್ಥಳಕ್ಕೆ ಬಂದಾಗ ಬಸ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ತನಿಖೆ ಕೈಗೊಂಡ ಪೊಲೀಸರು ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಲಭ್ಯ ಸುಳಿವುಗಳನ್ನು ಪರಿಶೀಲಿಸಿದಾಗ, ಸೆ.29ರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಬಸ್ ಕಳವು ಮಾಡಿಕೊಂಡು ತೆರಳಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಕಳವಾದ ಬಸ್‌ನ್ನು ಬೆನ್ನಟ್ಟಿದ ಪೊಲೀಸರು ಮುದರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆದರೆ ಬಸ್ ಕಳವು ಮಾಡಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಉಡುಪಿ ನಗರ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.