


ಡೈಲಿವಾರ್ತೆ:30/ಸೆ./2026

ಮಾಂಸದಂಗಡಿಯೇ ಡ್ರಗ್ಸ್ ಅಡ್ಡೆ! ಪೊಲೀಸರ ದಾಳಿಗೆ – 10.60 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ, ಇಬ್ಬರ ಬಂಧನ

ಬೆಂಗಳೂರು, ಸೆ.30: ಮಾಂಸದ ವ್ಯಾಪಾರದ ನೆಪದಲ್ಲಿ ಮಾದಕ ಪದಾರ್ಥಗಳ ಅಕ್ರಮ ಮಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜುನೈದ್ ಪಾಷಾ (30) ಹಾಗೂ ರಿಜ್ವಾನ್ ಬೇಗ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 10.60 ಲಕ್ಷ ರೂ. ಮೌಲ್ಯದ 106 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ನೈಜೀರಿಯಾ ಮೂಲದ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಖರೀದಿಸುತ್ತಿದ್ದರು. ಬಳಿಕ ಸಾರ್ವಜನಿಕರಿಗೆ ಅನುಮಾನ ಬಾರದಂತೆ ಮಾಂಸದ ಅಂಗಡಿಯನ್ನೇ ಮಾದಕ ವಸ್ತುಗಳ ಸಂಗ್ರಹ, ವಿತರಣೆ ಹಾಗೂ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಪಡೆದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಮಾಂಸದ ಅಂಗಡಿ ಮೇಲೆ ದಾಳಿ ನಡೆಸಿದಾಗ ಅಕ್ರಮ ದಂಧೆ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ 106 ಗ್ರಾಂ ಎಂಡಿಎಂಎ ಜತೆಗೆ ಎರಡು ಮೊಬೈಲ್ ಫೋನ್‌ಗಳು, 2,590 ರೂ. ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾದಕ ವಸ್ತು ಪೂರೈಕೆ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.