


ಡೈಲಿವಾರ್ತೆ:30/ಸೆ./2026

MRPL ವ್ಯಾಪ್ತಿಯಲ್ಲಿ ಭಾರೀ ಸ್ಫೋಟ:
ಜೋಕಟ್ಟೆ, ಬಜಪೆ, ಸುರತ್ಕಲ್ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ – ಮನೆಗಳ ಗೋಡೆಗಳಲ್ಲಿ ಬಿರುಕು, ಕಿಟಕಿ ಗಾಜುಗಳಿಗೆ ಹಾನಿ

ಮಂಗಳೂರು: ನಗರದ ಹೊರವಲಯದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವ್ಯಾಪ್ತಿಯಲ್ಲಿ ಬುಧವಾರ ಸಂಭವಿಸಿದೆ ಎನ್ನಲಾದ ಭಾರೀ ಸ್ಫೋಟದ ಶಬ್ದಕ್ಕೆ ಜೋಕಟ್ಟೆ, ಬಜಪೆ ಹಾಗೂ ಸುರತ್ಕಲ್ ಸುತ್ತಮುತ್ತಲಿನ ಪ್ರದೇಶಗಳು ಬೆಚ್ಚಿಬಿದ್ದಿವೆ. ಸ್ಫೋಟದ ತೀವ್ರತೆಗೆ ಹಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದ್ದು, ಕೆಲವೆಡೆ ಕಟ್ಟಡಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಘಟನೆಯ ತೀವ್ರತೆಯಿಂದ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದಿವೆ ಎನ್ನಲಾಗಿದೆ. ಏಕಾಏಕಿ ಕೇಳಿಬಂದ ಭಾರೀ ಶಬ್ದ ಹಾಗೂ ಕಟ್ಟಡಗಳು ಕಂಪಿಸಿದ ಅನುಭವದಿಂದ ಆತಂಕಗೊಂಡ ಸ್ಥಳೀಯರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಜೋಕಟ್ಟೆ, ಬಜಪೆ, ಸುರತ್ಕಲ್ ಸೇರಿದಂತೆ MRPL ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸ್ವರೂಪ ಮತ್ತು ಸ್ಫೋಟದ ತೀವ್ರತೆಯ ಕುರಿತು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
MRPL ಘಟಕದೊಳಗೆ ಯಾವುದೇ ತಾಂತ್ರಿಕ ದೋಷ, ಕೈಗಾರಿಕಾ ಪ್ರಕ್ರಿಯೆಯಲ್ಲಿನ ಅಸಹಜತೆ ಅಥವಾ ಇತರ ಕಾರಣಗಳಿಂದ ಘಟನೆ ಸಂಭವಿಸಿತೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಸ್ಫೋಟದಿಂದ MRPL ಘಟಕದೊಳಗೆ ಅಥವಾ ಹೊರಭಾಗದಲ್ಲಿ ಸಂಭವಿಸಿರುವ ಹಾನಿಯ ಪ್ರಮಾಣದ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಘಟನೆಯ ಹಿನ್ನೆಲೆಯಲ್ಲಿ MRPL ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಅಧಿಕಾರಿಗಳ ಪರಿಶೀಲನೆ ಹಾಗೂ ತನಿಖೆಯ ಬಳಿಕವಷ್ಟೇ ಘಟನೆಯ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.