


ಡೈಲಿವಾರ್ತೆ:30/ಸೆ./2026

ಸೌಜನ್ಯ ಪ್ರಕರಣದ ಮರುತನಿಖೆ ಚುರುಕು:
SITಗೆ 16 ಮಂದಿ ಪೊಲೀಸ್ ಅಧಿಕಾರಿಗಳ ನೇಮಕ!

ಮಂಗಳೂರು: ಬಹುಕಾಲದಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT)ಕ್ಕೆ ಇದೀಗ 16 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತನಿಖಾ ಸಹಾಯಕರಾಗಿ ನಿಯೋಜಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮರುತನಿಖೆ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆ.24ರಂದು ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ SIT ರಚಿಸಿತ್ತು. ಪೊಲೀಸ್ ಮಹಾನಿರೀಕ್ಷಕ ಎನ್. ಶಶಿಕುಮಾರ್ ಅವರು ತಂಡದ ಮುಖ್ಯಸ್ಥರಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತವಾರ್ತೆಯ ನಿಶಾ ಜೇಮ್ಸ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಸದಸ್ಯರಾಗಿದ್ದಾರೆ.
ಇದೀಗ ತನಿಖೆಯ ವಿವಿಧ ಹಂತಗಳಿಗೆ ಅಗತ್ಯ ಸಹಕಾರ ಒದಗಿಸುವ ಉದ್ದೇಶದಿಂದ ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಘಟಕಗಳ 16 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು SITಗೆ ನಿಯೋಜಿಸಲಾಗಿದೆ.
ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿಯ ಎಸಿಪಿ ರಾಮಚಂದ್ರ ಬಿ., ಸಿಐಡಿ ಇನ್ಸ್‌ಪೆಕ್ಟರ್‌ಗಳಾದ ದೀಪಕ್ ಹಾಗೂ ಮೋಹನ್ ಡಿ. ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್, ಕಂಕನಾಡಿ ಠಾಣೆಯ ಮಹಿಳಾ ಪಿಎಸ್ಐ ಅನಿತಾ ನಿಕಂ ಹಾಗೂ ಮಂಗಳೂರು ಸಿಸಿಬಿಯ ಎಎಸ್ಐ ಮೋಹನ್ ಸೇರಿದಂತೆ ಅಧಿಕಾರಿಗಳನ್ನು ತನಿಖಾ ಸಹಾಯಕರಾಗಿ ನೇಮಕ ಮಾಡಲಾಗಿದೆ.
ಇವರೊಂದಿಗೆ ಕಂಕನಾಡಿ ಠಾಣೆಯ ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ರೈ, ಗೋವರ್ಧನ್ ಹಾಗೂ ದಿನೇಶ್ ಎನ್., ಉಳ್ಳಾಲ ಠಾಣೆಯ ರಾಧಾಕೃಷ್ಣ ಕೆ.ಕೆ., ಕಾವೂರು ಠಾಣೆಯ ರೆಜಿ ವಿ.ಎಂ., ಸುರತ್ಕಲ್ ಠಾಣೆಯ ರಾಜೇಂದ್ರ ಪ್ರಸಾದ್ ವಿ.ಪಿ. ಮತ್ತು ಕಂಕನಾಡಿ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರು ಕೂಡ SITಗೆ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ತನಿಖೆಗೆ ಅಧಿಕೃತ ವೇಗ:
ನೇಮಕಗೊಂಡಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗಳಿಂದ ತಕ್ಷಣವೇ ಬಿಡುಗಡೆಗೊಳಿಸಿ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿರುವ SIT ಮುಂದೆ ವರದಿ ಮಾಡಿಕೊಳ್ಳುವಂತೆ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಸೆ.29ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಳಿಕ ಮರುತನಿಖೆಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ SIT ರಚನೆಯಾಗಿದ್ದು, ಇದೀಗ ಹೆಚ್ಚುವರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿಯೋಜನೆಯೊಂದಿಗೆ ತನಿಖಾ ತಂಡ ಮತ್ತಷ್ಟು ಬಲಗೊಂಡಿದೆ. ಪ್ರಕರಣದ ಮರುತನಿಖೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.