ಡೈಲಿವಾರ್ತೆ:30/ಸೆ./2026

ಎಂಆರ್‌ಪಿಎಲ್ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಸ್ಫೋಟದಲ್ಲಿ 13 ಮಂದಿಗೆ ಗಾಯ – ಓರ್ವ ಯುವಕ ಸ್ಥಳದಲ್ಲೇ ಸಾವು

ಮಂಗಳೂರು, ಸೆ.30: ಎಂಆರ್‌ಪಿಎಲ್‌ನ 3ನೇ ಹಂತದ ತೈಲ ಸ್ಥಾವರ ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟ ಪ್ರಕರಣಕ್ಕೆ ಘಟಕದ ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆ ತೋರಿದ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಅವರು ಎಂಆರ್‌ಪಿಎಲ್ 3ನೇ ಹಂತದಲ್ಲಿರುವ ಘಟಕದ ನೌಕರರಿಗೆ ಊಟ ಮತ್ತು ಉಪಾಹಾರ ಪೂರೈಸುವ ಕೆ-ಸ್ಟಾರ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಸುಮಾರು 12.15ಕ್ಕೆ ಊಟ ವಿತರಿಸಲು ಘಟಕಕ್ಕೆ ತೆರಳಿದ್ದ ವೇಳೆ ಕೋಕರ್ ಹೈಡ್ರೋ ಟ್ರಿಯರ್ ಯೂನಿಟ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ರವಿ ಪೂಜಾರಿ ಅವರಿಗೂ ಗಾಯಗಳಾಗಿವೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಗಂಭೀರವಾಗಿ ಗಾಯಗೊಂಡಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಿರ್ವಹಣಾ ವೈಫಲ್ಯವೇ ದುರಂತಕ್ಕೆ ಕಾರಣ?

ಎಂಆರ್‌ಪಿಎಲ್ 3ನೇ ಹಂತದ ಕೋಕರ್ ಹೈಡ್ರೋ ಟ್ರಿಯರ್ ಯೂನಿಟ್‌ನ ಯಂತ್ರೋಪಕರಣಗಳನ್ನು ಘಟಕದ ಮುಖ್ಯಸ್ಥರು ಹಾಗೂ ಎಂಆರ್‌ಪಿಎಲ್ ಸಂಸ್ಥೆಯವರು ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಸ್ಫೋಟ ಸಂಭವಿಸಿದೆ ಎಂದು ರವಿ ಪೂಜಾರಿ ಸುರತ್ಕಲ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 287, 125(ಬಿ) ಹಾಗೂ 106ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಒಂದೂವರೆ ವರ್ಷದ ಹಿಂದಷ್ಟೇ ಉದ್ಯೋಗ:
ದುರಂತದಲ್ಲಿ ಕಿರಿಯ ಪುತ್ರನ ಅಂತ್ಯ

ಸ್ಫೋಟದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಹಳೆಯಂಗಡಿ ನಿವಾಸಿಗಳಾದ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ ಅವಳಿ ಪುತ್ರರಲ್ಲಿ ಕಿರಿಯವರು. ಸುಮಾರು ಒಂದೂವರೆ ವರ್ಷದ ಹಿಂದಷ್ಟೇ ಗುತ್ತಿಗೆ ನೌಕರನಾಗಿ ಎಂಆರ್‌ಪಿಎಲ್ ಸೇರಿದ್ದ ಮನೀಶ್, ಉತ್ತಮ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಹಳೆಯಂಗಡಿಯ ಸಿಎಸ್‌ಐ ಅಮ್ಮಾನ್ ಮೆಮೋರಿಯಲ್ ಚರ್ಚ್‌ನ ಸದಸ್ಯರಾಗಿದ್ದ ಮನೀಶ್ ಅವರ ಅಕಾಲಿಕ ಸಾವು ಕುಟುಂಬಸ್ಥರು, ಸ್ನೇಹಿತರು ಹಾಗೂ ಚರ್ಚ್ ಸಮುದಾಯದಲ್ಲಿ ತೀವ್ರ ನೋವು ಮೂಡಿಸಿದೆ.
ವೆನ್ಲಾಕ್ ಆಸ್ಪತ್ರೆ ಬಳಿ ಆಕ್ರೋಶ
ಮನೀಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ತರಲಾಗಿದ್ದು, ಆಸ್ಪತ್ರೆಯ ಶವಾಗಾರದ ಬಳಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಎಂಆರ್‌ಪಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಸಂಸದ ಬ್ರಿಜೇಶ್ ಚೌಟ ಆಗಮಿಸಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಂಸದರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿದರು. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವಂತೆ ಕುಟುಂಬಸ್ಥರು ಸಂಸದರ ಬಳಿ ಒತ್ತಾಯಿಸಿದರು.
ಈಗಾಗಲೇ ಒಂದು ಎಫ್‌ಐಆರ್ ದಾಖಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಮತ್ತೊಂದು ಪ್ರಕರಣ ದಾಖಲಿಸುವ ಬಗ್ಗೆ ಪೊಲೀಸರೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ತಿಳಿಸಿದರು. ಮೃತ ಯುವಕನ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು ಕಂಪನಿಯೊಂದಿಗೆ ಮಾತುಕತೆ ನಡೆಸಿ ಅಗತ್ಯ ವ್ಯವಸ್ಥೆ ಮಾಡುವುದಾಗಿಯೂ ಅವರು ಭರವಸೆ ನೀಡಿದರು.