ಡೈಲಿವಾರ್ತೆ:01/ಅ./2026

ಮಕ್ಕಳನ್ನೇ ನೀರಿನಲ್ಲಿ ಮುಳುಗಿಸಿದ ತಾಯಿ; ಜೋಡಿ ಕಂದಮ್ಮಗಳ ಹತ್ಯೆ ಪ್ರಕರಣ ಬಯಲು! ಕೊಲೆ ಆರೋಪದಡಿ ತಾಯಿ ಅರೆಸ್ಟ್

ಪಾಲಕ್ಕಾಡ್: ಕೇರಳದ ಕೊಳಿಂಜಂಪರ ಸಮೀಪದ ಮೆನನ್‌ಪಾರದಲ್ಲಿರುವ ಬಾಡಿಗೆ ಮನೆಯ ಸ್ನಾನಗೃಹದ ಕಾಂಕ್ರೀಟ್ ನೀರಿನ ಟ್ಯಾಂಕ್‌ನಲ್ಲಿ ಇಬ್ಬರು ಪುಟ್ಟ ಮಕ್ಕಳ ಶವ ಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಕ್ಕಳ ತಾಯಿ ನಿವೇದ್ಯ (33) ಅವರನ್ನು ಪೊಲೀಸರು ಕೊಲೆ ಆರೋಪದಡಿ ಬಂಧಿಸಿದ್ದಾರೆ.

ಮೃತ ಮಕ್ಕಳನ್ನು 5 ವರ್ಷದ ಜೆನ್ನಿಫರ್ ಜೂಲಿಯೆಟ್ ಹಾಗೂ 3 ವರ್ಷದ ರಾಬಿನ್ ಕ್ರಿಸ್ಟೋಫರ್ ಎಂದು ಗುರುತಿಸಲಾಗಿದೆ. ಇಬ್ಬರೂ ಜಾನ್ ಕುಮಾರ್ ಹಾಗೂ ನಿವೇದ್ಯ ದಂಪತಿಯ ಮಕ್ಕಳು.

ಮಂಗಳವಾರ ಕೂರಂಕಾಡ್‌ನಲ್ಲಿರುವ ಬಾಡಿಗೆ ಮನೆಯ ಸ್ನಾನಗೃಹದ ನೀರಿನ ಟ್ಯಾಂಕ್‌ನಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಿವೇದ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಗು ಸ್ನಾನ ಮಾಡುತ್ತಿದ್ದ ವೇಳೆ ಮೊದಲು ಜೆನ್ನಿಫರ್‌ಳನ್ನು ನೀರಿನಲ್ಲಿ ಮುಳುಗಿಸಿದ ಬಳಿಕ ರಾಬಿನ್‌ನನ್ನೂ ಅದೇ ರೀತಿ ನೀರಿನಲ್ಲಿ ಮುಳುಗಿಸಲಾಗಿದೆ. ಘಟನೆಯ ಹಿಂದಿನ ನಿಖರ ಕಾರಣ ಹಾಗೂ ಕೊಲೆ ನಡೆದ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.
ನಿವೇದ್ಯ ತನ್ನ ಅಧ್ಯಯನವನ್ನು ಮುಂದುವರಿಸುವುದರ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರಿಯುವ ಆಸೆ ಹೊಂದಿದ್ದಳು. ಮಕ್ಕಳ ಜವಾಬ್ದಾರಿಯಿಂದ ತನ್ನ ಸ್ವತಂತ್ರ ಜೀವನಕ್ಕೆ ಅಡ್ಡಿಯಾಗುತ್ತಿದೆ ಎಂಬ ಭಾವನೆ ಆಕೆಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಕುಟುಂಬದಲ್ಲಿನ ಸಮಸ್ಯೆಗಳು ಹಾಗೂ ಮರ ಕಡಿಯುವ ಕೆಲಸ ಮಾಡುತ್ತಿದ್ದ ಪತಿ ಜಾನ್ ಕುಮಾರ್ ಅವರೊಂದಿಗೆ ಆಗಾಗ್ಗೆ ನಡೆಯುತ್ತಿದ್ದ ಜಗಳಗಳ ಬಗ್ಗೆಯೂ ಆಕೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಮಕ್ಕಳನ್ನು ಕೊಲೆ ಮಾಡುವ ಹಿಂದಿನ ನಿಖರ ಉದ್ದೇಶವೇನು ಮತ್ತು ಯಾವ ಪರಿಸ್ಥಿತಿಯಲ್ಲಿ ಕೃತ್ಯ ನಡೆದಿದೆ ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಡಿವೈಎಸ್ಪಿ ಎಂ. ಶಶಿಧರನ್ ತಿಳಿಸಿದ್ದಾರೆ.

ಮಕ್ಕಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ದೇಹದ ಮೇಲೆ ಗಾಯಗಳಾಗಿರುವುದು ಅಥವಾ ದೈಹಿಕ ಹಲ್ಲೆಯ ಯಾವುದೇ ಗುರುತುಗಳು ಕಂಡುಬಂದಿಲ್ಲ. ಶ್ವಾಸಕೋಶಕ್ಕೆ ನೀರು ಪ್ರವೇಶಿಸಿದ ಪರಿಣಾಮ ಮಕ್ಕಳು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ನಿವೇದ್ಯ ಅವರ ಹೇಳಿಕೆಯನ್ನು ದಾಖಲಿಸಿದ್ದು, ಬುಧವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.