ಡೈಲಿವಾರ್ತೆ: 09/ನ./2026

ದೀಪಾವಳಿ ಪಟಾಕಿ ಎಂದು ಭಾವಿಸಿ ಸ್ಫೋಟಕಕ್ಕೆ ಬೆಂಕಿ – ಭೀಕರ ಸ್ಫೋಟಕ್ಕೆ 15ರ ಬಾಲಕನ ತಲೆ ಛಿದ್ರ, ಸ್ಥಳದಲ್ಲೇ ಸಾವು!

ಕಲಬುರಗಿ: ಕಾಡುಹಂದಿಗಳನ್ನು ಓಡಿಸಲು ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುವನ್ನು ದೀಪಾವಳಿ ಪಟಾಕಿ ಎಂದು ತಪ್ಪಾಗಿ ಭಾವಿಸಿ ಬೆಂಕಿ ಹಚ್ಚಿದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಭೀಮರಾಯ (15) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಬಾಲಕ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ ಕ್ಷಣದಲ್ಲೇ ಅದು ತೀವ್ರವಾಗಿ ಸ್ಫೋಟಗೊಂಡಿದ್ದು, ಸ್ಫೋಟದ ರಭಸಕ್ಕೆ ಆತನ ತಲೆ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕನ ತಂದೆ ಕಾಡುಹಂದಿಗಳನ್ನು ಓಡಿಸುವ ಉದ್ದೇಶದಿಂದ ಮನೆಯಲ್ಲಿ ಸ್ಫೋಟಕ ಮದ್ದನ್ನು ತಂದಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಅರಿವಿಲ್ಲದ ಭೀಮರಾಯ, ಅದನ್ನು ದೀಪಾವಳಿಗೆ ಬಳಸುವ ಪಟಾಕಿ ಎಂದು ಭಾವಿಸಿ ಬೆಂಕಿ ಹಚ್ಚಿದ್ದಾನೆ. ಆದರೆ, ಕ್ಷಣಾರ್ಧದಲ್ಲೇ ಸಂಭವಿಸಿದ ಭಾರೀ ಸ್ಫೋಟ ಬಾಲಕನ ಪ್ರಾಣವನ್ನೇ ಬಲಿ ಪಡೆದಿದೆ.
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.