ಡೈಲಿವಾರ್ತೆ: 10/ನ./2026

ನಾಟಕವಾಡಿ ಭಿಕ್ಷಾಟನೆ: ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು – ಪೊಲೀಸರ ವಶಕ್ಕೆ

ತುಮಕೂರು: ಅಂಗವೈಕಲ್ಯವಿರುವ ವ್ಯಕ್ತಿಯಂತೆ ವೇಷ ಧರಿಸಿ ಸಾರ್ವಜನಿಕರಿಂದ ಭಿಕ್ಷೆ ಸಂಗ್ರಹಿಸುತ್ತಿದ್ದ ಯುವಕನೊಬ್ಬನ ವಂಚನೆ ಬಯಲಾಗಿದ್ದು, ಆತನನ್ನು ಹಿಡಿದ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕ ಕಾಲಿಗೆ ವಾಕಿಂಗ್ ಸ್ಟಿಕ್ ಅಳವಡಿಸಿಕೊಂಡು, ಕೈಕಾಲುಗಳನ್ನು ನಡುಗಿಸುತ್ತಾ ಹಾಗೂ ಕುತ್ತಿಗೆಯನ್ನು ಅಲುಗಾಡಿಸುತ್ತಾ ವಿಶೇಷಚೇತನನಂತೆ ನಟಿಸಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ.

ಈತನ ನಡವಳಿಕೆ ಬಗ್ಗೆ ಅನುಮಾನಗೊಂಡ ಭಗತ್ ಕ್ರಾಂತಿ ಸೇನೆಯ ಕಾರ್ಯಕರ್ತರು ಆತನನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ವಂಚನೆಯ ವಿಚಾರ ಬೆಳಕಿಗೆ ಬಂದಿದೆ.

ಯುವಕನ ಕಾಲಿಗೆ ಆಧಾರವಾಗಿ ಬಳಸುತ್ತಿದ್ದ ವಾಕಿಂಗ್ ಸ್ಟಿಕ್ ಅನ್ನು ತೆಗೆದು ಪರಿಶೀಲಿಸಿದಾಗ ಆತನಿಗೆ ಯಾವುದೇ ಅಂಗವೈಕಲ್ಯ ಇಲ್ಲದಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಯುವಕನಿಗೆ ಹಲ್ಲೆ ನಡೆಸಿದ್ದಾರೆ.
ಇದೇ ವೇಳೆ ಯುವಕನ ಬಳಿ ಇದ್ದ ಭಿಕ್ಷಾಟನೆಯ ಜೋಳಿಗೆಯನ್ನು ಪರಿಶೀಲಿಸಿದಾಗ 10 ಮತ್ತು 20 ರೂಪಾಯಿ ಮುಖಬೆಲೆಯ ನೋಟುಗಳು ಸೇರಿದಂತೆ ಸಾವಿರಾರು ರೂಪಾಯಿ ನಗದು ಪತ್ತೆಯಾಗಿದೆ. ಈತ ಪ್ರತಿದಿನ ಭಿಕ್ಷಾಟನೆಯ ಮೂಲಕ ಸುಮಾರು 5ರಿಂದ 10 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ ಎನ್ನಲಾಗಿದೆ.

ಬಳಿಕ ಭಗತ್ ಕ್ರಾಂತಿ ಸೇನೆಯ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಜೋಳಿಗೆಯಲ್ಲಿ ದೊರೆತ ಹಣವನ್ನು ಸಾರ್ವಜನಿಕರು ಸಿದ್ದಗಂಗಾ ಮಠದ ಅನ್ನದಾಸೋಹಕ್ಕೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

ಈತನೊಬ್ಬನೇ ಇಂತಹ ಕೃತ್ಯದಲ್ಲಿ ತೊಡಗಿದ್ದಾನೆಯೇ ಅಥವಾ ಇದರ ಹಿಂದೆ ಸಂಘಟಿತ ಭಿಕ್ಷಾಟನಾ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣದ ಸಮಗ್ರ ತನಿಖೆಯಿಂದ ಮಾತ್ರ ಇದರ ಹಿಂದಿರುವ ವಾಸ್ತವಾಂಶ ಹೊರಬರಬೇಕಿದೆ.