ಡೈಲಿವಾರ್ತೆ: 12/ನ./2026

ಭಟ್ಕಳ: ನಿಯಂತ್ರಣ ತಪ್ಪಿ ಸ್ಕೂಟರ್ ಪಲ್ಟಿ – ತಲೆಗೆ ಗಂಭೀರ ಗಾಯಗೊಂಡ ಮೀನುಗಾರ ಚಿಕಿತ್ಸೆ ಫಲಿಸದೆ ಸಾವು!

ಭಟ್ಕಳ, ನ.12: ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದ ಮೀನುಗಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಹೆಬಳೆ ಹೊನ್ನೆಗದ್ದೆಯ ತೆಂಗಿನಗುಂಡಿ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ವೆಂಕಟಾಪುರ ನಿವಾಸಿ ಲೋಕೇಶ್ ಪಾಂಡುರಂಗ ಮೊಗೇರ (33) ಎಂದು ಗುರುತಿಸಲಾಗಿದೆ.

ಲೋಕೇಶ್ ಅವರು ತಮ್ಮ ಸ್ಕೂಟರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ತೆಂಗಿನಗುಂಡಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಹೊನ್ನೆಗದ್ದೆ ಸಮೀಪ ಸ್ಕೂಟರ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ಸ್ಕೂಟರ್ ಸಹಿತ ರಸ್ತೆಗೆ ಬಿದ್ದಿದ್ದು, ಈ ವೇಳೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.