ಡೈಲಿವಾರ್ತೆ: 12/ನ./2026

ಭಟ್ಕಳ: ಚಿನ್ನಾಭರಣ ನಾಪತ್ತೆ ಪ್ರಕರಣದ ಆಘಾತ – ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ!

ಭಟ್ಕಳ, ನ.12: ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದು ತಿಳಿದು ತೀವ್ರ ಆತಂಕಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ.

ಮೃತರನ್ನು ಯಲ್ಲಾಪುರ ತಾಲೂಕಿನ ಹರನಗದ್ದೆ ಮೂಲದ, ಪ್ರಸ್ತುತ ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ಅಗ್ಗೋಳೆ ಬಸ್ತಿಯಲ್ಲಿ ನೆಲೆಸಿದ್ದ ದಿನೇಶ್ ಮೋಹನ್ ಮಡಿವಾಳ (42) ಎಂದು ಗುರುತಿಸಲಾಗಿದೆ.
ದಿನೇಶ್ ಅವರು ಮನೆಯ ಗೋದ್ರೇಜ್ ಕಪಾಟಿನಲ್ಲಿ ಸುಮಾರು 12 ತೊಲೆ ಚಿನ್ನಾಭರಣಗಳನ್ನು ಇಟ್ಟಿದ್ದರು. ನ.7ರಂದು ಕಪಾಟನ್ನು ಪರಿಶೀಲಿಸಿದಾಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಘಟನೆಯಿಂದ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಚಿನ್ನಾಭರಣ ನಾಪತ್ತೆಯಾದ ವಿಚಾರದಿಂದ ಮನನೊಂದಿದ್ದ ಅವರು ನ.10ರಂದು ಮಧ್ಯಾಹ್ನ 2.45ರಿಂದ ರಾತ್ರಿ 8 ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪುರ ನದಿಗೆ ಹಾರಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಾಹಿತಿ ದೊರೆತ ಕೂಡಲೇ ಸಿಪಿಐ ವೆಂಕಟೇಶ್ ಮಿರ್ನಾಳ್ ಹಾಗೂ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ, ಅಂದು ರಾತ್ರಿ ಅವರ ಸುಳಿವು ಪತ್ತೆಯಾಗಿರಲಿಲ್ಲ.
ಬುಧವಾರ ನ.11ರಂದು ಬೆಳಗ್ಗೆ ಸುಮಾರು 5.15ರ ವೇಳೆಗೆ ಶಿರಾಲಿಯ ಮೊಗೇರಕೇರಿಯ ಸಮೀಪ ವೆಂಕಟಾಪುರ ನದಿಯ ದಡದಲ್ಲಿ ದಿನೇಶ್ ಅವರ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.