


ಡೈಲಿವಾರ್ತೆ: 12/ನ./2026




ಶಿವಮೊಗ್ಗ: ಕೆರೆಕೈ ಸರ್ಕಾರಿ ಶಾಲೆಯ ಅಡುಗೆ ಕೋಣೆಗೆ ಬೆಂಕಿ – ದುಷ್ಕರ್ಮಿಗಳಿಂದ ಸಿಲಿಂಡರ್ ಸ್ಫೋಟಿಸಲು ಸಂಚು, ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ: ಸಾಗರ ತಾಲೂಕಿನ ತುಮರಿ ಸಮೀಪದ ಕೆರೆಕೈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಾಲೆಯ ಅಡುಗೆ ಕೋಣೆಗೆ ಬೆಂಕಿ ಹಚ್ಚಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಲು ಯತ್ನಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ತಡರಾತ್ರಿ ಶಾಲೆಯ ಅಡುಗೆ ಕೋಣೆಯ ಬಾಗಿಲಿನ ಮುಂಭಾಗದಲ್ಲಿ ಕಸಕಡ್ಡಿಗಳನ್ನು ರಾಶಿ ಹಾಕಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಾಲೆಯ ಆವರಣದಲ್ಲಿದ್ದ ಪೈಪ್ಲೈನ್, ಪ್ರವೇಶ ದ್ವಾರ ಹಾಗೂ ನೀರಿನ ಟ್ಯಾಂಕ್ಗಳಿಗೂ ಹಾನಿ ಎಸಗಲಾಗಿದೆ. ಗ್ಯಾಸ್ ಸಿಲಿಂಡರ್ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸುವಂತೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಯ ಆಸ್ತಿಪಾಸ್ತಿಗೆ ಹಾನಿ ಮಾಡಿ, ಸಂಭವನೀಯ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದಾಗಿದ್ದ ಕೃತ್ಯವನ್ನು ಖಂಡಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮರಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ-369ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಂಡರು. ಈ ವೇಳೆ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಗುರಿಯಾಗಿಸಿಕೊಂಡು ಇಂತಹ ಕಿಡಿಗೇಡಿತನದ ಘಟನೆಗಳು ಪದೇಪದೆ ನಡೆಯುತ್ತಿವೆ ಎಂಬುದು ಸ್ಥಳೀಯರ ಅಳಲಾಗಿದೆ. ಕೆಲವೇ ದಿನಗಳ ಹಿಂದೆ ಇದೇ ವ್ಯಾಪ್ತಿಯ ರಂಗಮಂದಿರಕ್ಕೂ ದುಷ್ಕರ್ಮಿಗಳು ಹಾನಿ ಎಸಗಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಸಾರ್ವಜನಿಕರ ಬಳಕೆಯಲ್ಲಿರುವ ಶಾಲೆ ಹಾಗೂ ಇತರ ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸುತ್ತಿರುವ ಕೃತ್ಯಗಳಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರು ಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ, ತಪ್ಪಿತಸ್ಥರನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

