


ಡೈಲಿವಾರ್ತೆ: 12/ನ./2026




ಕುಂದಾಪುರ: ದಾಖಲೆ ಕೇಳಿದ ಕ್ಯಾಶ್ಯೂ ಕಾರ್ಖಾನೆ ಮಾಲೀಕನಿಗೆ ಜೀವ ಬೆದರಿಕೆ: ಆಡಿಟರ್ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಕಾರ್ಖಾನೆಯ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಸಂಬಂಧಿತ ಕೆಲಸಗಳನ್ನು ನಿರ್ವಹಿಸುತ್ತಿದ್ದ ಆಡಿಟರ್ ಒಬ್ಬರು, ವೈಯಕ್ತಿಕ ದಾಖಲೆಗಳನ್ನು ಹಿಂದಿರುಗಿಸುವಂತೆ ಕೇಳಿದ ಕಾರ್ಖಾನೆ ಮಾಲೀಕರಿಗೆ ಅವಾಚ್ಯವಾಗಿ ನಿಂದಿಸಿ, ಕೈಕಾಲು ಮುರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬೈಂದೂರು ತಾಲೂಕಿನ ಸೂರ್ಕುಂದ ನಿವಾಸಿ ಪ್ರಭಾಕರ ಶೆಟ್ಟಿ (46) ಅವರು ಆಶೀರ್ವಾದ ಕ್ಯಾಶ್ಯೂ ಕಾರ್ಖಾನೆಯ ಮಾಲೀಕರಾಗಿದ್ದು, ಕಾರ್ಖಾನೆಯ ಲೆಕ್ಕಪರಿಶೋಧನೆ, ವಾಣಿಜ್ಯ ಹಾಗೂ ಆದಾಯ ತೆರಿಗೆ ಸೇರಿದಂತೆ ಕಾರ್ಮಿಕರಿಗೆ ಸಂಬಂಧಿಸಿದ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಎಸ್. ರಮಾನಂದ ಆಚಾರ್ಯ ಎಂಬವರಿಗೆ ವಹಿಸಿದ್ದರು ಎನ್ನಲಾಗಿದೆ.
ಆದರೆ, ಆಪಾದಿತರು ಉದ್ದೇಶಪೂರ್ವಕವಾಗಿ ಕೆಲಸಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಾರ್ಖಾನೆಯ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕೆಲಸ ನೀಡುವುದನ್ನು ನಿಲ್ಲಿಸಲಾಗಿತ್ತು. ಈ ನಡುವೆ, ಪ್ರಭಾಕರ ಶೆಟ್ಟಿಯವರ ವೈಯಕ್ತಿಕ ದಾಖಲೆಗಳು ಆಪಾದಿತರ ಬಳಿಯೇ ಉಳಿದಿದ್ದವು.
ನ. 5ರಂದು ಮಧ್ಯಾಹ್ನ 1.15ರ ಸುಮಾರಿಗೆ ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ಸುಶಾಂತ್ ಪ್ಲಾಜಾದ ಮೊದಲ ಮಹಡಿಯಲ್ಲಿನ ಆಪಾದಿತರ ಕಚೇರಿಗೆ ತೆರಳಿದ ಪ್ರಭಾಕರ ಶೆಟ್ಟಿ, ತಮ್ಮ ವೈಯಕ್ತಿಕ ದಾಖಲೆಗಳನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ಆಪಾದಿತರು ಅವಾಚ್ಯವಾಗಿ ನಿಂದಿಸಿ, ಮತ್ತೆ ದಾಖಲೆಗಳ ವಿಚಾರವಾಗಿ ಕಚೇರಿಗೆ ಬಂದರೆ ಕೈಕಾಲು ಮುರಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಪ್ರಭಾಕರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 352 ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

