ಡೈಲಿ ವಾರ್ತೆ: 01 ನವಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ಕಬ್ಬು ಬೆಳೆಗಾರ ರೈತರ ಮನದಲ್ಲಿ ದುಗುಡ ಹುಟ್ಟು ಹಾಕಿದಂತಾಗಿದೆ: 2 ದಿನ ಕಾರ್ಖಾನೆ ಬಂದ್‌!


ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಯರಗಲ್ಲ-ಮದರಿ ಬಳಿ ಇರುವ ಈ ಭಾಗದ ಏಕೈಕ ಸಕ್ಕರೆ ಕಾರ್ಖಾನೆ ಶನಿವಾರ ಕೆಲ ಕಿಡಿಗೇಡಿ ರೈತರ ದಾಂಧಲೆಯಿಂದಾಗಿ 2 ದಿನ ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆಯನ್ನು ಬಂದ್‌ ಮಾಡಿರುವುದು ನೈಜ ಕಬ್ಬು ಬೆಳೆಗಾರ ರೈತರ ಮನದಲ್ಲಿ ದುಗುಡ ಹುಟ್ಟು ಹಾಕಿದಂತಾಗಿದೆ.

ಪ್ರಚೋದನಕಾರಿ ಭಾಷಣ:
ರೈತ ಸಂಘಟನೆಯೊಂದರ ನೇತೃತ್ವದಲ್ಲಿ ಎಫ್‌ಆರ್‌ಪಿಗೆ ಬೇಡಿಕೆ ಇಟ್ಟಿದ್ದ ರೈತರು ಶಾಂತವಾಗಿಯೇ ಕಾರ್ಖಾನೆ ಎದುರು ಧರಣಿಗೆ ಮುಂದಾಗಿದ್ದರು.
ಈ ವೇಳೆ ಅಕ್ರಮ ಮರಳು ದಂಧೆಯೊಂದಿಗೆ ತಳುಕು ಹಾಕಿಕೊಂಡಿರುವ ರೈತ ಮುಖಂಡನೊಬ್ಬ ಮಾಡಿದ ಪ್ರಚೋದನಕಾರಿ ಭಾಷಣ ಕೆಲ ರೈತರಲ್ಲಿ ಆಕ್ರೋಶ ಹುಟ್ಟು ಹಾಕಿ ಅವರು ಕಾರ್ಖಾನೆಯೊಳಗೆ ನುಗ್ಗಿ, ಕಲ್ಲೆಸೆದಿದ್ದೂ ಅಲ್ಲದೆ ಕಬ್ಬು ನುರಿಸುವ ಯಂತ್ರದ ಕೇನ್‌ ಕ್ಯಾರಿಯರ್‌ ಮೇಲೆ ನಿಂತು ಕೆಲ ಹೊತ್ತು ಆತಂಕ
ಸೃಷ್ಟಿಸಿದ್ದರು. ತಕ್ಷಣ ಯಂತ್ರ ಬಂದ್‌ ಮಾಡದಿದ್ದರೆ ಅವರೆಲ್ಲರೂ ಕಬ್ಬಿನ ಜಲ್ಲೆಗಳ ಸಮೇತ ಯಂತ್ರದ ಬಾಯಿಯೊಳಗೆ ಸಿಕ್ಕು ನುಜ್ಜು ನುಜ್ಜಾಗಿ ಪ್ರಾಣ ಕಳೆದುಕೊಳ್ಳುವ ಸಂಭವ ಇತ್ತು.

ಕಿಡಿಗೇಡಿ ರೈತರ ಈ ಕೃತ್ಯದಿಂದ ಹೆದರಿದ ಕಾರ್ಖಾನೆಯ ಆಡಳಿತ ಮಂಡಳಿಯವರು ತಕ್ಷಣ ಯಂತ್ರಗಳನ್ನು ಬಂದ್‌ ಮಾಡಿ ಸಂಭವನೀಯ ಆತಂಕ ತಡೆಗಟ್ಟಿದರು. ಆ ವೇಳೆ ಬಂದ್‌ ಆಗಿರುವ ಯಂತ್ರಗಳು ರವಿವಾರ ಸಂಜೆವರೆಗೂ ಚಾಲೂ ಆಗಿಲ್ಲ. ಇದರ ಪರಿಣಾಮ ಕಬ್ಬು ನುರಿಸುವ ಒಟ್ಟಾರೆ ಪ್ರಕ್ರಿಯೆ ಬಂದ್‌ ಆಗಿ ಕಾರ್ಖಾನೆಗೆ ಕಬ್ಬು ಹೊತ್ತು ತಂದಿರುವ ರೈತರು ಅಸಹಾಯಕತೆಯಿಂದ ಕಾರ್ಖಾನೆ ಆಡಳಿತ ಮಂಡಳಿ ಮತ್ತು ರೈತ ಸಂಘಟನೆಗಳ ಮುಖಂಡರತ್ತ ನೋಡುವಂತಾಗಿದೆ.

ರೈತರ ಮೇಲೆಯೇ ದುಷ್ಪರಿಣಾಮ:
ಕಾರ್ಖಾನೆ ಬಂದ್‌ ಆಗಿರುವುದರ ದುಷ್ಪರಿಣಾಮ ನೇರವಾಗಿ ಕಬ್ಬು ಬೆಳೆಯುವ ರೈತರ ಮೇಲೆ ಪ್ರಭಾವ ಬೀರಿದಂತಾಗಿದೆ. ಕಾರ್ಖಾನೆ ಬಂದ್‌ ಆಗಿದ್ದರಿಂದ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಸುಮ್ಮನೆ ಕೂಡಿಸಿ ಸಂಬಳ ಕೊಡುವಂತಾಗಿದ್ದು ಮಾತ್ರವಲ್ಲದೆ ನಿತ್ಯದ ಸಕ್ಕರೆ ಉತ್ಪಾದನಾ ಪ್ರಮಾಣದಲ್ಲೂ ಸಾಕಷ್ಟು ಹೊಡೆತ ಬಿದ್ದಂತಾಗಿದೆ. ರೈತರು ತಮ್ಮ ನ್ಯಾಯಯುತ ಬೇಡಿಕೆಗೆ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಸಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ.

ಸತ್ಯ ಇವರಿಗೆ ಗೊತ್ತಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ:
ಕಾನೂನಾತ್ಮಕ ರೀತಿಯಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ತೂರಿಕೊಂಡಿದ್ದ 3-4 ಕಿಡಿಗೇಡಿಗಳ ಅತಿರೇಕ, ಉದ್ದಟತನ, ಗಲಾಟೆ ಸೃಷ್ಟಿಸುವ ಮನೋಭಾವ ಎಲ್ಲ ಗೊಂದಲಕ್ಕೆ ಕಾರಣವಾಗಿ ಕೊನೆಗೆ ರೈತ ಮುಖಂಡರೇ ಈ ಕಿಡಿಗೇಡಿಗಳ ಕೃತ್ಯವನ್ನು ಬಹಿರಂಗವಾಗಿ ಖಂಡಿಸುವಂತಾಗಿತ್ತು. ಇವೆಲ್ಲದರ ಜೊತೆಗೆ ಕಬ್ಬು ಹೊತ್ತು ತಂದಿದ್ದ ಇತರೆ ರೈತರ ವಾಹನಗಳ ಮೇಲೂ ಕಿಡಿಗೇಡಿಗಳು ತಾವೂ ರೈತರು ಅನ್ನೋದನ್ನು ಮರೆತು ಕಲ್ಲು ತೂರಲು ಮುಂದಾಗಿದ್ದು ಅವರ ಮನಸ್ಥಿತಿ ಎತ್ತಿ ತೋರಿಸುವಂತಿತ್ತು. ಕಾರ್ಖಾನೆ ಬಂದ್‌ ಆದರೆ ಆಡಳಿತ ಮಂಡಳಿಯವರಿಗಿಂತ ಹೆಚ್ಚು ನಷ್ಟ ಅನುಭವಿಸುವವರು ರೈತರೇ ಅನ್ನೋ ಸತ್ಯ ಇವರಿಗೆ ಗೊತ್ತಾಗಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಅನ್ನೋ ಮಾತು ಇದೀಗ ಕೇಳಿ ಬರತೊಡಗಿದೆ.

ಕಟಾವು ಪ್ರಕ್ರಿಯೆ ಸ್ಥಗಿತ:
ಅ.7ರಂದು ಕಾರ್ಖಾನೆಯಲ್ಲಿ ಬಾಯ್ಲರ್‌ ಪ್ರದೀಪನ ಮಾಡಲಾಗಿತ್ತು. ಅ. 12ರಿಂದ 2022-23ನೇ ಸಾಲಿನ ಹಂಗಾಮಿಗೆ ಕಬ್ಬು ನುರಿಸಲು ಚಾಲನೆ ನೀಡಲಾಗಿತ್ತು. ಇದಕ್ಕಾಗಿ ಕಾರ್ಖಾನೆಯವರು ಕಬ್ಬು ಕಟಾವು ತಂಡಗಳನ್ನು ಗೊತ್ತುಪಡಿಸಿ, ಆಯಾ ಭಾಗದ ರೈತರ ಜಮೀನುಗಳಿಗೆ ಕಾರ್ಮಿಕರನ್ನು ನಿಯೋಜಿಸಿ ಕಬ್ಬು ಕಟಾವು ಪ್ರಾರಂಭಿಸಿದ್ದರು.

ಕಟಾವು ಮಾಡಿದ ಕಬ್ಬನ್ನು ಯಥಾವಕಾಶ ಕಾರ್ಖಾನೆಗೆ ಸಾಗಿಸಲು ಟ್ರ್ಯಾಕ್ಟರ್‌, ಲಾರಿಗಳನ್ನು ಬಳಸಲಾಗುತ್ತಿತ್ತು. ಅ. 29ರ ಮಧ್ಯಾಹ್ನ 12 ಗಂಟೆಯಿಂದ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಬಂದ್‌ ಆಗಿರುವುದರಿಂದ ರೈತರ ಜಮೀನುಗಳಿಂದ ಕಬ್ಬು ಹೊತ್ತು ತಂದ ವಾಹನಗಳು ಕಾರ್ಖಾನೆ ಆವರಣದಲ್ಲೇ ನಿಲ್ಲುವಂತಾಗಿದೆ. ಹೀಗೆ ನಿಂತ ಕಬ್ಬು ಬಿಸಿಲಿಗೆ ಸಿಕ್ಕು ರಸ ಉತ್ಪಾದಿಸುವ ಸಾಮರ್ಥ್ಯ ಕಡಿಮೆಯಾಗುವ ಆತಂಕ ಹುಟ್ಟು ಹಾಕಿದೆ.

ಸದ್ಯ ಕಬ್ಬು ನುರಿಸುವ ಕಾರ್ಯ ಬಂದ್‌ ಆಗಿರುವುದರಿಂದ ಈ ಸಮಸ್ಯ:
ಇದರ ಜೊತೆಗೆ ಅದಾಗಲೇ ರೈತರ ಜಮೀನಿನಲ್ಲಿ ಕಟಾವು ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಮಿಕರು ಕೆಲಸವಿಲ್ಲದೆ ಕೂಡುವಂತಾಗಿದ್ದು ಮಾತ್ರವಲ್ಲದೆ ಕಟಾವು ಮಾಡಿದ ಕಬ್ಬನ್ನು ಸಾಗಿಸಲಾಗಿದೆ ಜಮೀನಿನಲ್ಲೇ ಹಾಕಿದ್ದಾರೆ. ಇದರಿಂದಲೂ ಕಬ್ಬಿನಲ್ಲಿರುವ ರಸ ಉತ್ಪಾದನೆಯ ಸಕ್ಕರೆ ಅಂಶ ಕಡಿಮೆ ಆಗುವ ಆತಂಕ ಸೃಷ್ಟಿಯಾಗಿದೆ. ಕಬ್ಬು ಕಟಾವು ಮಾಡುವುದು, ವಾಹನಗಳಿಗೆ ಹೇರುವುದು, ವಾಹನಗಳು ಕಾರ್ಖಾನೆಯ ಕೇನ್‌ ಕ್ಯಾರಿಯರ್‌ಗೆ ತಂದು ಹಾಕುವುದು, ಕ್ಯಾರಿಯರ್‌ ಮೂಲಕ ಕಬ್ಬು ನುರಿಸು ರಸ ಮಾಡಿ ಅದನ್ನು ಸಕ್ಕರೆ ಪ್ರಕ್ರಿಯೆಗೆ ಕಳಿಸುವುದು, ಕಬ್ಬು ಇಳಿಸಿ ಖಾಲಿಯಾದ ವಾಹನಗಳು ಮತ್ತೇ ನಿಗದಿತ ಜಮೀನಿಗೆ ಮರಳಿ ಕಬ್ಬು ಹೇರಿಕೊಂಡು ಕಾರ್ಖಾನೆಗೆ ಬರುವುದು ಇದು ನಿರಂತರ ಪ್ರಕ್ರಿಯೆ. ಸದ್ಯ ಕಬ್ಬು ನುರಿಸುವ ಕಾರ್ಯ ಬಂದ್‌ ಆಗಿರುವುದರಿಂದ ಇವೆಲ್ಲ ಪ್ರಕ್ರಿಯೆಗಳು ನಿಂತು ಹೋಗಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಕಾರ್ಖಾನೆಯ ಸ್ಥೂಲ ನೋಟ:
ಆರಂಭದಲ್ಲಿ ದಿನಕ್ಕೆ 3500 ಟನ್‌ ಕಬ್ಬು ನುರಿಸುವ ಸಾಮರ್ಥ್ಯ (3500ಟಿಸಿಡಿ) ಹೊಂದಿದ್ದ ಕಾರ್ಖಾನೆಯನ್ನು ರೈತರ ಪ್ರೋತ್ಸಾಹ ಪರಿಗಣಿಸಿ 10000 ಟಿಸಿಡಿ ಸಾಮರ್ಥ್ಯಕ್ಕೆ ಅಪ್‌ಗ್ರೇಡ್‌ ಮಾಡಲಾಗಿದೆ. ವಾರ್ಷಿಕ ಕಬ್ಬು ಹಂಗಾಮು ಮುಗಿಯುವ 150 (ಇದು ವ್ಯತ್ಯಾಸವಾಗಬಹುದು) ದಿನಗಳವರೆಗೂ ಅಂದಾಜು 15 ಲಕ್ಷ ಟನ್‌ವರೆಗೆ ಕಬ್ಬು ನುರಿಸುವ ಗುರಿ ಹಾಕಿಕೊಳ್ಳಲಾಗುತ್ತದೆ. 2021-22ನೇ ಸಾಲಿನಲ್ಲಿ 10.68 ಲಕ್ಷ ಟನ್‌ ಕಬ್ಬು ನುರಿಸಿ 98362 ಟನ್‌ ಸಕ್ಕರೆ ಉತ್ಪಾದಿಸಿದ್ದು ಈ ಪ್ರಮಾಣ ಶೇ.10.18ರಷ್ಟಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ, ಬಸವನಬಾಗೇವಾಡಿ, ಇಂಡಿ ತಾಲೂಕುಗಳು ಮಾತ್ರವಲ್ಲದೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಇಳಕಲ್ಲ, ನಿಡಗುಂದಿ ತಾಲೂಕು ಸೇರಿ ಅಕ್ಕಪಕ್ಕದ ಜಿಲ್ಲೆ, ತಾಲೂಕುಗಳ ರೈತರು ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ.

ಪ್ರಸ್ತುತ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯೊಂದರಲ್ಲೇ 10 ಲಕ್ಷ ಟನ್‌ ಕಬ್ಬು ಬೆಳೆಯಲಾಗುತ್ತಿದೆ. 33000 ಎಕರೆ ಕಬ್ಬಿನ ಪ್ರದೇಶ ಇದ್ದು ಕಾರ್ಖಾನೆಯ ವ್ಯಾಪ್ತಿಯಲ್ಲಿ ಒಟ್ಟು 53000 ಎಕರೆ ಪ್ರದೇಶ ಇದೆ. ಒಮ್ಮೆ ಕಾರ್ಖಾನೆ ಕಬ್ಬು ನುರಿಸಲುಪ್ರಾರಂಭಿಸಿದರೆ ನಿರಂತರ ಚಾಲೂ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ನಡುವೆ ಬಂದ್‌ ಆದಲ್ಲಿ ಅದರ ಪರಿಣಾಮ ನೇರವಾಗಿ ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರು ಅನುಭವಿಸಬೇಕಾಗುತ್ತದೆ.

ಪೊಲೀಸ್‌ ಭದ್ರತೆಯೊಂದಿಗೆ ಕಾರ್ಖಾನೆ ಪ್ರಾರಂಭ:
ವಿಜಯಪುರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಕಾರ್ಖಾನೆ ಪ್ರತಿನಿಧಿಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ಕಾರ್ಖಾನೆ ಪ್ರಾರಂಭಿಸಲು ಜಿಲ್ಲಾ  ಧಿಕಾರಿಯವರು ಸೂಚಿಸಿದ್ದಾರೆ. ನಾವು ಸರ್ಕಾರದ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ.
ವೆಂಕಟೇಶ ಪಾಟೀಲ, ವ್ಯವಸ್ಥಾಪಕ
ನಿರ್ದೇಶಕರು, ಬಾಲಾಜಿ ಸಕ್ಕರೆ ಕಾರ್ಖಾನೆ

ರೈತ ಮುಖಂಡರು ಕಾರ್ಖಾನೆಯ ತೂಕದ ಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಕ್ಕರೆ ಇಲಾಖೆಯ ಕಮೀಷನರ್‌ಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಕೋರುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಸದ್ಯಕ್ಕೆ ಕಾರ್ಖಾನೆಯವರು ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ನೀಡುತ್ತಿದ್ದಾರೆ.
ಬಿ.ಎಸ್‌. ಕಡಕಭಾವಿ, ತಹಶೀಲ್ದಾರ್‌

ಹೋರಾಟ ಕಾನೂನಾತ್ಮಕವಾಗಿ ನಡೆದಿಲ್ಲ. ಶನಿವಾರ ನಡೆದ ಅಹಿತಕರ ಘಟನೆ ಒಪ್ಪುವಂಥದ್ದಲ್ಲ. ಹೋರಾಟದ ರೂಪು ರೇಷೆ ಗೊತ್ತಿಲ್ಲದವರು ಗದ್ದಲ ಮಾಡಿದ್ದಾರೆ. ಕಾರ್ಖಾನೆಯವರು ಮಾನವೀಯತೆಯಿಂದ ರೈತರ ಬೇಡಿಕೆ ಒಪ್ಪಬಹುದಾಗಿದೆ. ಹೀಗಾಗಿ ಹೋರಾಟಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುತ್ತಿದ್ದೇವೆ.
ಅರವಿಂದ ಕುಲಕರ್ಣಿ ಪ್ರಧಾನ
ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ.