ಡೈಲಿ ವಾರ್ತೆ: 13/ಮೇ /2024
ಸಸಿಹಿತ್ಲು: ಚಿಪ್ಪು ಹೆಕ್ಕಲು ಹೋದ ಯುವಕ ನೀರುಪಾಲು, ಇಬ್ಬರ ರಕ್ಷಣೆ!
ಮೂಲ್ಕಿ: ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಚಿಪ್ಪು ಹೆಕ್ಕಲು ಹೋದ ಯುವಕರ ತಂಡದಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ ಚಿಪ್ಪು ಹೆಕ್ಕಲು ಬಂದಿದ್ದರು. ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಷ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್‌ರವರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಷ್ ಮೃತ ಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.