ಡೈಲಿ ವಾರ್ತೆ: 27 ಜನವರಿ 2023

ಜ. 31 ರಂದು ಕರ್ಕಿ ಮಠದ ಶ್ರೀ ಜ್ಞಾನೇಶ್ವರಿ ದೇವಿಯ ರಜತ ರಥೋತ್ಸವ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಶ್ರೀ ಕ್ಷೇತ್ರ ಕರ್ಕಿ ಯಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಜ್ಞಾನೇಶ್ವರಿ ದೇವಿಯ ವರ್ಷಂಪ್ರತಿ ನಡೆಯುವ ರಜತ ರಥೋತ್ಸವವು ಜ. 31 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಜರುಗಲಿರುವುದು.

ರಥೋತ್ಸವದ ಪೂರ್ವಾಂಗವಾಗಿ ಜ.28 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು
ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಪುಣ್ಯಾಹ, ಕಲಶ ಸ್ಥಾಪನೆ, ನವಗ್ರಹ ಹೋಮ, ಪರಿವಾರ ಹೋಮ, ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ , ಸಾಯಂಕಾಲ ಭಜನಾ ಕಾರ್ಯಕ್ರಮ, ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿರುವುದು.

ಜ. 31ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಜ್ಞಾನೇಶ್ವರಿ ಭೋಜನ ಶಾಲೆಯ ಉಧ್ಘಾಟನೆ ಹಾಗೂ ಜ್ಞಾನಾನ್ನ ನಿಧಿಗೆ ಸಹಕಾರ ನೀಡಿದ ದಾನಿಗಳಿಗೆ ಸಮ್ಮಾನ ಸತ್ಕಾರ ಕಾರ್ಯಕ್ರಮ ಸದ್ಗುರುಗಳಾದ ಪರಮ ಪೂಜ್ಯ ಶ್ರೀ. ಶ್ರೀ. ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ನೆರವೇರಲಿದೆ.
ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ಶ್ರೀ ಜ್ಞಾನೇಶ್ವರಿ ದೇವಿಯ ರಜತ ರಥಾರೋಹಣ, ಪೂರ್ಣಾಹುತಿ, ಮಹಾಪೂಜೆ , ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಸೇವಾ ಕರ್ತರಿಂದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು.
ಸಂಜೆ 5 ಗಂಟೆಗೆ ಶ್ರೀ ಜ್ಞಾನೇಶ್ವರಿ ದೇವಿಯ ರಜತ ರಥೋತ್ಸವದ ಮೆರವಣಿಗೆಯು ನೂರಾರು ಭಕ್ತರ ಸಮ್ಮುಖದಲ್ಲಿ ರಾ.ಹೆದ್ದಾರಿಯಲ್ಲಿ ಸಾಗಲಿರುವುದು. ಅನಂತರ ಸ್ಥಳೀಯ ಭಜನಾ ಮಂಡಳಿ ಅವರಿಂದು ಭಜನಾ ಕಾರ್ಯಕ್ರಮ, ಮೃಗಬೇಟೆ, ಶ್ರೀ ದೇವಿಯ ಪಲ್ಲಕ್ಕಿಯ ತೆಪ್ಪೋತ್ಸವ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಕರ್ಕಿ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.