ಡೈಲಿ ವಾರ್ತೆ:06 ಫೆಬ್ರವರಿ 2023

ವರದಿ: ಅದ್ದಿ ಬೊಳ್ಳೂರು

ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸುವಲ್ಲಿ ಸಾಮಾಜಿಕ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ: ಆರಿಫ್ ಬಾಖಾವಿ ಕೊಪ್ಪ

ಹಳೆಯಂಗಡಿ: ಮುಹಿಯ್ಯುದ್ದೀನ್ ಜುಮ್ಮಾ ಮಸ್ಟಿದ್ ಬೊಳ್ಳೂರು ನಲ್ಲಿ ನಡೆದ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ ಹಾಗು ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ವೇದಿಕೆಯಲ್ಲಿ ಪ್ರಾಸ್ತಾವಿಕ ಭಾಷಣ ನೀಡಿ ಮಾತನಾಡಿದ ಬೊಳ್ಳೂರು ಮಸೀದಿಯ ಮುದರ್ರಿಸ್ ‘ಆರಿಫ್ ಬಾಖಾವಿ ಕೊಪ್ಪ ಇವರು “”ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸುವಲ್ಲಿ ಸಾಮಾಜಿಕ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು



ಬೊಳ್ಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರಸಿದ್ಧ ಉಲಮಾಗಳ ಕಥಾಪ್ರಸಂಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ರಾತ್ರಿ ವಾರ್ಷಿಕ ರಿಫಾಯಿ ರಾತೀಬ್ ನೊಂದಿಗೆ ಸಂಭ್ರಮ ಸಂಪನ್ನಗೊಂಡಿತು.

ಶನಿವಾರ ಮಧ್ಯಾಹ್ನ ಖತೀಬರಾದ ಬೊಳ್ಳೂರು ಉಸ್ತಾದ್ ಮುಹಮ್ಮದ್ ಅಝ್ಹರ್ ಫೈಝಿ ಅವರು ಧಫ್ ರಾತೀಬ್ ಮಜ್ಲೀಸ್ ಉದ್ಘಾಟಿಸಿ, ಪ್ರಸಿದ್ಧ ದಫ್ ಉಸ್ತಾದ್ ಗಳ ನೇತೃತ್ವದಲ್ಲಿ “ರಿಫಾಯಿ ದಫ್ ರಾತೀಬ್ ಮಜ್ಲೀಸ್ ನೆರವೇರಿತು.

ಬೊಳ್ಳೂರು ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ರಾತ್ರಿ ಸಮಾರೋಪ ಸಮಾರಂಭ ವೇದಿಕೆ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಪ್ರಧಾನ ಕಾರ್ಯದರ್ಶಿ ‘ಎಂ.ಟಿ. ಅಬ್ದುಲ್ಲಾ ಮುಸ್ಲಿಯರ್ ಮಾತನಾಡಿ ” ಗತಕಾಲದ ಸಮಸ್ತ ವಿದ್ವಾಂಸರು ಅತ್ಯುತ್ತಮ ಸಂದೇಶಗಳನ್ನು ನೀಡಿದ್ದಾರೆ, ವಿದ್ವಾಂಸರಾಗಿದ್ದ ಶಂಸುಲ್ ಉಲಮಾ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲಾ ಮುನ್ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದ ಅತಿಥಿಯಾಗಿ, ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫ್ಯಾನ್ಸೊ ಫ್ರಾಂಕೊ ಮಾತನಾಡಿ “ಸಮಾಜದಲ್ಲಿ ಸರ್ವರೂ ಪರಸ್ಪರ ಸಂಬಂಧಗಳನ್ನು ಬೆಳೆಸಿ ಶಾಂತಿ ಪಾಲನೆಯನ್ನು ಕಾಪಾಡಿಕೊಳ್ಳಲು ಇಂತಹ ಧಾರ್ಮಿಕ ವೇದಿಕೆಗಳು ಸಹಕಾರಿಯಾದೆ. ನಾವೆಲ್ಲಾ ಜಾತಿ, ಧರ್ಮದ ಲೇಪವಿಲ್ಲದೆ ಪರಸ್ಪರ ಪ್ರೀತಿ, ವಿಶ್ವಾಸವನ್ನು ಬೆಳೆಸಿ ಸೌಹಾರ್ದತೆಯಿಂದ ಬದುಕೋಣ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿತುನ್ ರೈ ಮಾತನಾಡಿ ” ಜೀವನದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯ ಅನುಸಾರ ಮಾಡಬೇಕು, ನಮ್ಮ ಕಡೇ ಉಸಿರು ಇರೋವರೆಗೂ ಈ ಜಿಲ್ಲೆಯ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರೋಣ ಸಮಾಜದಲ್ಲಿ ಶಾಂತಿಯನ್ನು ಉಳಿಸೋಣ ” ಎಂದರು.

ಆ ಬಳಿಕ ಕೇರಳದ ಪ್ರಸಿದ್ಧ ಸೈಯದ್ ಜೆಫ್ರಿ ತಂಙಳ್ ಆಗಮಿಸಿ ದುವಾ° ಆಶಿರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವಿಧ ಧಾರ್ಮಿಕ ಮುಖಂಡರು, ಸ್ಥಳೀಯ ಶಾಸಕರು, ರಾಜಕೀಯ ನಾಯಕರು, ಗ್ರಾಮ ಪಂಚಾಯತಿ ಸದಸ್ಯರು, ಬೊಳ್ಳೂರು ಮಸೀದಿ ಕಮಿಟಿಯ ಪ್ರಮುಖರು ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಅಬ್ದುಲ್ ನಾಸೀರ್ ಮುಸ್ಲಿಯರ್ ಸ್ವಾಗತಿಸಿ, ಜೆ.ಯಮ್. ಹನೀಫ್ ದಾರಿಮಿ ಅಂಕೋಲ ವಂದಿಸಿದರು, ತಯ್ಯುಬ್ ಪೈಝಿ ಬೊಳ್ಳೂರು’ ಕಾರ್ಯಕ್ರಮ ನಿರೂಪಿಸಿದರು.