ಡೈಲಿ ವಾರ್ತೆ:06 ಫೆಬ್ರವರಿ 2023

ಫೆ. 7 ರಂದು ಹೆಜಮಾಡಿಯಿಂದ ಹಿರಿಯಡಕದವರೆಗೆ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ ಸಂಚಾರ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಕಾಪು: ರಾಜ್ಯ ಸರಕಾರದ ಭ್ರಷ್ಟಾಚಾರ, ವಚನ ಭ್ರಷ್ಟತೆ, ಶೇ. 40 ಕಮಿಷನ್ ದಂಧೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ದುರಾಡಳಿತದಿಂದ ಕಂಗಾಲಾಗಿರುವ ಜನ ಸಾಮಾನ್ಯರ ಧ್ವನಿಯಾಗಿ ಕಾಂಗ್ರೆಸ್ ಪಕ್ಷವು ರಾಜ್ಯದಾದ್ಯಂತ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ. 7ರಂದು ಕಾಪು ವಿಧಾನಸಭಾ ಕ್ಷೇತ್ರದಾದ್ಯಂತ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದರು.

ಸೋಮವಾರ ಕಾಪು ರಾಜೀವ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬೆಳಗ್ಗೆ 9 ಗಂಟೆಗೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಿಂದ ಆರಂಭಗೊಳ್ಳಲಿರುವ ಕರಾವಳಿ ಪ್ರಜಾಧ್ವನಿ ಯಾತ್ರೆಯು ಸಂಜೆ 5 ಗಂಟೆಗೆ ಹಿರಿಯಡಕದಲ್ಲಿ ಸಮಾಪನಗೊಳ್ಳಲಿದೆ. ಯಾತ್ರೆಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಚತುಶ್ಚಕ್ರ ವಾಹನಗಳು ಮತ್ತು ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಪಕ್ಷದ ಮುಖಂಡರು ಭಾಗಿ: ಎಐಸಿಸಿ ಸೂಚನಯಂತೆ ನಡೆಯುವ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಪ್ರಮುಖರಾದ ಆರ್. ವಿ. ದೇಶಪಾಂಡೆ, ಯು.ಟಿ. ಖಾದರ್, ಮಂಜುನಾಥ ಭಂಡಾರಿ ಸಹಿತ ಪಕ್ಷದ ವಿವಿಧ ಹಂತಗಳ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.

ಯಾತ್ರೆ ಸಂಚರಿಸುವ ಪ್ರದೇಶಗಳು: ಹೆಜಮಾಡಿ ಪೇಟೆಯಿಂದ ಆರಂಭಗೊಂಡು ಪಡುಬಿದ್ರಿ, ನಂದಿಕೂರು, ಮುದರಂಗಡಿ ಜಂಕ್ಷನ್, ಎಲ್ಲೂರು, ಬೆಳಪು, ಪಕೀರ್ಣಕಟ್ಟೆ, ಮಜೂರು, ಕುತ್ಯಾರು, ಶಿರ್ವ, ಪಾಂಬೂರು, ಬಂಟಕಲ್ಲು, ಶಂಕರಪುರ, ಸುಭಾಸ್ ನಗರ, ಕಟಪಾಡಿ, ಉದ್ಯಾವರ, ಅಲೆವೂರು, 80 ಬಡಗಬೆಟ್ಟು, ಹಿರೇಬೆಟ್ಟು, ಆತ್ರಾಡಿ, ಕೊಡಿಬೆಟ್ಟು, ಹಿರಿಯಡಕದಲ್ಲಿ ಸಮಾಪನಗೊಳ್ಳಲಿದೆ. ಪಡುಬಿದ್ರಿ, ಶಿರ್ವ, ಕಟಪಾಡಿ, ಉದ್ಯಾವರ, ಆತ್ರಾಡಿ, ಹಿರಿಯಡಕದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ದಕ್ಷಿಣ ವಿಭಾಗದ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಪ್ರಧಾನ ಕಾರ್ಯದರ್ಶಿ ಸುನೀಲ್ ಬಂಗೇರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮೋಹನ್‌ಚಂದ್ರ ನಂಬಿಯಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.