ಡೈಲಿ ವಾರ್ತೆ:10 ಫೆಬ್ರವರಿ 2023
ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆಗೆ ಶ್ರೀರಾಮ ಸೇನೆಯಲ್ಲೇ ಅಪಸ್ವರ!
ಉಡುಪಿ : ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಆದರೆ ಶ್ರೀರಾಮ ಸೇನೆಯಲ್ಲೇ ಕೆಲವರು ಅವರ ನಿರ್ಧಾರದ ವಿರುದ್ದ ಆಕ್ಷೇಪವೆತ್ತಿದ್ದಾರೆ. ”ಕಾರ್ಕಳದ ಶಾಸಕ, ಸಚಿವ ಸುನಿಲ್ ಕುಮಾರ್ ಅವರ ವಿರುದ್ಧ ವೈಯಕ್ತಿಕ ದ್ವೇಷ ಹೊಂದಿರುವ ಕಾರ್ಕಳದ ಉದ್ಯಮಿ ಮತ್ತು ವಕೀಲರೊಬ್ಬರು ಒತ್ತಾಯಪೂರ್ವಕವಾಗಿ ಸ್ಪರ್ಧಿಸುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಗೌರವಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ , ವಿಭಾಗಾಧ್ಯಕ್ಷ ಮೋಹನ್ ಭಟ್ , ಉಡುಪಿಯ ಸಂದೀಪ್ ಮೂಡುಬೆಟ್ಟು ಮತ್ತು ವಕ್ತಾರ ಶ್ರೀನಿವಾಸ್ ರಾವ್ ಅವರು ಮುತಾಲಿಕ್ ಅವರ ನಿರ್ಧಾರವನ್ನು ವಿರೋಧಿಸಿದ್ದಾರೆ.
ನಾವು ಹಿಂದಿನಿಂದಲೂ ಮುತಾಲಿಕ್ ಅವರೊಂದಿಗೆ ಇದ್ದಿದ್ದೆವು. ಬಜರಂಗದಳದಿಂದ ನಿಮ್ಮನ್ನು ಹೊರಹಾಕಿದಾಗಲೂ ಇದ್ದೆವು. ಆದರೆ, ಮುತಾಲಿಕ್ ಅವರ ಅಭಿಮಾನಿ ಬಳಗ ಎಂದು ಕಾರ್ಕಳದಲ್ಲಿ ನಡೆದ ಯಾವುದೇ ಸಭೆಗೆ ತಮ್ಮನ್ನು ಆಹ್ವಾನಿಸಲಿಲ್ಲ. ಎಲ್ಲಾ ಹಿಂದೂ ಸಂಘಟನೆಗಳೂ ಮುತಾಲಿಕ್ ಅವರನ್ನು ಗುರುಗಳೇ ಎಂದು ಕರೆಯುತ್ತಾರೆ. ನಿಮ್ಮ ಈ ನಿರ್ಧಾರದಿಂದ ಕಾರ್ಯಕರ್ತರು ಬೀದಿ ಪಾಲಾಗುತ್ತಾರೆ. ಹಿಂದೂಗಳನ್ನು ಒಗ್ಗಟ್ಟಿನಲ್ಲಿರುವುದನ್ನು ಕಲಿಸಿ , ನೀವು ಶಾಸಕರಾಗುವುದು ನಿಮ್ಮ ಕನಸಲ್ಲ. ಅದು ಎಲ್ಲಾ ಹಿಂದೂ ಕಾರ್ಯಕರ್ತರ ಒಗ್ಗಟ್ಟಿನಿಂದ ನಿಮಗೆ ದಕ್ಕಬೇಕೆಂಬುದು ನಮ್ಮ ಆಶಯ” ಎಂದು ಹೇಳಿದ್ದಾರೆ.