ಡೈಲಿ ವಾರ್ತೆ:14 ಫೆಬ್ರವರಿ 2023

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯ ಪತ್ತೆ: ಆತಂಕದಲ್ಲಿ ಪಡಿತರದಾರರು!

ಕುಣಿಗಲ್ : ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುವ ಅಕ್ಕಿಯಲ್ಲಿ ಯೂರಿಯ ಪತ್ತೆಯಾಗಿರುವ ಘಟನೆ ತಾಲೂಕಿನ ಅಮೃತೂರಿನ ರೇಣುಕಾ ನ್ಯಾಯಬೆಲೆ ಅಂಗಡಿಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಪಾವಗಡ ತಾಲೂಕು ರ‍್ರಮ್ಮನಹಳ್ಳಿ ನ್ಯಾಯ ಬೆಲೆ ಅಂಗಡಿಯ ಅಕ್ಕಿಯಲ್ಲಿ ಯೂರಿಯ ಪ್ರಕರಣ ಮಾಸುವ ಮುನ್ನವೇ ಕುಣಿಗಲ್ ತಾಲೂಕಿನ ಅಮೃತೂರಿನಲ್ಲಿ ಇಂತದ್ದೇ ಒಂದು ಘಟನೆ ನಡೆದಿದ್ದು, ಪಡಿತದಾರರ ಆತಂಕಕ್ಕೆ ಕಾರಣವಾಗಿದೆ.

ಬಡತನ ರೇಖೆಗಿಂತ ಕೆಳಗೆ ಇರುವ ಬಡ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂ. ಖರ್ಚು ಮಾಡಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಉಚಿತವಾಗಿ ಪಡಿತದಾರರಿಗೆ ಪಡಿತರ ಸಾಮಗ್ರಿಗಳನ್ನು ನೀಡುತ್ತಿದೆ, ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ್ದಾಗಿ ಬಡ ಜನರು ತಿನ್ನುವ ಆಹಾರದಲ್ಲಿ ವಿಷ ಪೂರಿತ ರಾಸಾಯಿನಿಕ ಗೊಬ್ಬರ ಹರಳುಗಳು ಪತ್ತೆಯಾಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ,

ವಿತರಣೆ ಸ್ಥಗಿತ : ತಾಲೂಕಿನ ಅಮೃತೂರಿನ ರೇಣುಕಾ ನ್ಯಾಯಬೆಲೆ ಅಂಗಡಿಯಲ್ಲಿ ಸೋಮವಾರ ಪಡಿತದಾರರಿಗೆ ವಿತರಣೆ ಮಾಡಲಾಗಿದ್ದ, ಅಕ್ಕಿಯಲ್ಲಿ ಯೂರಿಯ ಇರುವುದು ಕಂಡು ಬಂದಿದೆ, ಮನೆಗೆ ತೆಗೆದುಕೊಂಡು ಹೋದ ಪಡಿತರದಾರರು ಅಕ್ಕಿಯನ್ನು ತೊಳೆದು ಅನ್ನ ಮಾಡುವ ವೇಳೆಯಲ್ಲಿ ಅಕ್ಕಿಯಲ್ಲಿ ಯೂರಿಯ ಇರುವುದನ್ನು ಪತ್ತೆಯಾಗಿದೆ, ಪಡಿತರದಾರರು ತಕ್ಷಣ ನ್ಯಾಯ ಬೆಲೆ ಅಂಗಡಿ ಮಾಲೀಕರ ಗಮನಕ್ಕೆ ತಂದಿದ್ದಾರೆ, ಎಚ್ಚೆತ್ತುಕೊಂಡು ನ್ಯಾಯ ಬೆಲೆ ಅಂಗಡಿಯ ಮಾಲೀಕರು ಅಕ್ಕಿ ವಿತರಣೆಯನ್ನು ಸ್ಥಗಿತಗೊಸಿ ಕುಣಿಗಲ್ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

10 ಅಕ್ಕಿ ಚೀಲದಲ್ಲಿ ಯೂರಿಯ ಪತ್ತೆ : ಅಮೃತೂರು ಪಟ್ಟಣದಲ್ಲಿ ಮೂರು ನ್ಯಾಯ ಬೆಲೆ ಅಂಗಡಿಗಳು ಇದ್ದು ಇದರಲ್ಲಿ ರೇಣುಕಾ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತದಾರರಿಗೆ ವಿತರಣೆ ಮಾಡಲೆಂದು ತಂದಿದ್ದ 124 ಬ್ಯಾಗ್‌ಗಳ ಪೈಕಿ 10 ಚೀಲದಲ್ಲಿ ಯೂರಿಯದ ಅರಳುಗಳು ಇರುವುದು ಪತ್ತೆಯಾಗಿದೆ,

ಗ್ರಾಹಕರಿಂದ ವಾಪಸ್ ಪಡೆದ ಅಕ್ಕಿ : ಅಕ್ಕಿಯಲ್ಲಿ ಯೂರಿಯ ಇರುವುದು ಪತ್ತೆಯಾಗುತ್ತಿರುವ ವಿಚಾರ ತಿಳಿಯುತ್ತಿದಂತೆ ಎಚ್ಚೆತುಕೊಂಡ ಆಹಾರ ಇಲಾಖೆಯ ಪ್ರಭಾರ ಶಿರಸ್ತೇದಾರ್ ಸಚಿನ್ ಸ್ಥಳಕ್ಕೆ ದೌಡಾಯಿಸಿ, ಸೋಮವಾರ ಎಷ್ಟು ಮಂದಿಗೆ ಅಕ್ಕಿ ವಿತರಣೆಯಾಗಿದೆ ಎಂಬ ಮಾಹಿತಿಯನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರಿಂದ ಪಡೆದುಕೊಂಡು ಪಡಿತದಾರರ ಮನೆಗೆ ಖುದ್ದು ಬೇಟಿ ನೀಡಿ ವಿತರಣೆ ಮಾಡಲಾಗಿದ್ದ ಅಕ್ಕಿಯನ್ನು ಪಡಿತದಾರರಿಂದ ವಾಪಸ್ಸ್ ಪಡೆದು ಬೇರೆ ಅಕ್ಕಿಯನ್ನು ನೀಡಿದ್ದಾರೆ, ಬಳಿಕ ಅಧಿಕಾರಿಗಳು ಖುದ್ದು ನ್ಯಾಯ ಬೆಲೆ ಅಂಗಡಿ ಬಳಿ ಇದ್ದು ಪ್ರತಿಯೊಂದು ಚೀಲವನ್ನು ತೆರೆದು ಅಕ್ಕಿಯನ್ನು ಪರಿಶೀಲಿಸಿದ ಬಳಿಕ ಅಕ್ಕಿ ವಿತರಣೆಗೆ ಕ್ರಮಕೈಗೊಂಡಿದ್ದಾರೆ.

ಸತ್ತೋದರೆ ಗತಿ ಏನು : ಕೂಲಿ, ನಾಲಿ ಮಾಡಿಕೊಂಡು ಜೀವನ ಮಾಡೋಣ, ಇದನ್ನು ತಿಂದ್ದು ಸತ್ತರೇ ನಮ್ಮ ಗತಿ ಏನು ಎಂದು ಪಡಿತದಾರರು ನ್ಯಾಯ ಬೆಲೆ ಅಂಗಡಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

” ರೇಣುಕಾ ನ್ಯಾಯ ಬೆಲೆ ಅಂಗಡಿಯಿಂದ 60 ಮಂದಿ ಪಡಿತದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ, ಈ ಪೈಕಿ ಕೆಲ ಮಂದಿ ಪಡಿತದಾರರಿಗೆ ಯೂರಿಯ ಮಿಶ್ರಿತ ಇರುವ ಅಕ್ಕಿಯನ್ನು ವಿತರಣೆ ಮಾಡಲಾಗಿದೆ, ಅಧಿಕಾರಿಗಳು ಮನೆ ಮನೆಗೆ ಖುದ್ದು ಬೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಅಕ್ಕಿ ಚೀಲದಲ್ಲಿ ಯೂರಿಯ ಯಾವ ರೀತಿ ಬಂದಿದೆ ಎಂಬುದರ ಬಗ್ಗೆ ತನಿಖೆಗೆ ಮಾಡಲಾಗುವುದು”
ಮಹಬಲೇಶ್ವರ ತಹಶೀಲ್ದಾರ್

” ಅಕ್ಕಿ ಯೂರಿಯ ಹಾಗೂ ಇತರೆ ವಸ್ತುಗಳು ರೈಲ್ವೆ ಬೋಗಿಯಲ್ಲಿ ಸರಬರಾಜು ಆಗುತ್ತಿರುತ್ತದೆ, ಆ ವೇಳೆ ಅಮಾಲೀಗಳು ಚೀಲಗಳಿಗೆ ಅಕ್ಕಿ ತುಂಬವ ವೇಳೆ, ಯೂರಿಯ ತುಂಬಿರ ಬಹುದು ಎಂಬದು ಸಂಶಯ ಇದೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ”
ಸಚಿನ್, ಪ್ರಭಾರ ಆಹಾರ ಶಿರಸ್ತೇದಾರ್