ಡೈಲಿ ವಾರ್ತೆ:15 ಫೆಬ್ರವರಿ 2023

ಉಡುಪಿ: “ಡೋಂಗಿ ಹಿಂದುತ್ವ, ಭ್ರಷ್ಟಾಚಾರ ವಿರುದ್ಧ ನನ್ನ ಸ್ಪರ್ಧೆ” ಸಚಿವ ಸುನಿಲ್ ಗೆ ಮುತಾಲಿಕ್ ತಿರುಗೇಟು

ಉಡುಪಿ: ಕಾರ್ಕಳದಲ್ಲಿ ಸುನಿಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ವಾಕ್ಸಮರ ಬಿರುಸು ಪಡೆದಿದೆ.

ಚುನಾವಣೆಯ ಖರ್ಚಿಗಾಗಿ ಕೆಲವು ದಿನಗಳ ಹಿಂದೆ ಜನರಿಂದ ಪ್ರಮೋದ್ ಮುತಾಲಿಕ್ ಹಣ ಕೇಳಿದ್ದರು. ಓಟಿನ ಜೊತೆ ನೋಟೂ ಕೊಡಿ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಸಚಿವ ಸುನಿಲ್, ನೀವು ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದಾ? ಎಂದು ಕೆಣಕಿದ್ದರು.

ಸಚಿವ ಸುನಿಲ್ ಕುಮಾರ್ ಗೆ ಪ್ರಮೋದ್ ಮುತಾಲಿಕ್
ತಿರುಗೇಟು ನೀಡಿದ್ದು, ಸುನಿಲ್ ಕುಮಾರ್ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ
ಬರಬೇಕಾಗಿಲ್ಲ. ದುಡ್ಡ ಗಳಿಸಬೇಕಾಗಿದ್ದರೆ ನನಗೆ 45
ವರ್ಷ ಬೇಕಾಗಿರಲಿಲ್ಲ ಎಂದು ಹೇಳಿದರು.

ಸುನಿಲ್ ಕುಮಾರ್ ಎಲ್ಲಿದ್ದರು? ಈಗ ಎಲ್ಲಿ ತಲುಪಿದ್ದಾರೆ? ಏನು ಆಗಿದ್ರಿ? ಈಗೇನು ಆಗಿದ್ದೀರಿ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನೀವು ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದೀರಿ. ಮುತಾಲಿಕ್ ಹಣ ಮಾಡುವವನಲ್ಲ, ಈ ಆರೋಪ ನಿಮಗೆ ಶೋಭೆ ತರಲ್ಲ.

ಕಾರ್ಯಕರ್ತರ ಓಡಾಟ, ಊಟ- ತಿಂಡಿ, ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಕಾರ್ಕಳದ 40 ಹಳ್ಳಿ ತಲುಪಲು ನಾನೊಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ.
ಡೋಂಗಿ ಹಿಂದೂ ವಾದ, ಭ್ರಷ್ಟಾಚಾರದ ವಿರುದ್ಧ ನಾನು ಹೋರಾಡಲು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ ಎಂದು ಸುನಿಲ್ ಗೆ ತಿರುಗೇಟು ನೀಡಿದ್ದಾರೆ.