ಡೈಲಿ ವಾರ್ತೆ:17 ಫೆಬ್ರವರಿ 2023
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಹಾಗೂ ಯೋಜನಾಧಿಕಾರಿ
ದಾವಣಗೆರೆ: ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಖಾಸಗಿ ಲೇಔಟ್ ನಿರ್ಮಾಣಕ್ಕೆ ಪರವಾನಗಿ ನೀಡಲು ಮೂರು ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆಯುವಾಗ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಮಂಜು ಕೆ.ಆರ್ ಹಾಗೂ ನಗರ ಯೋಜನಾಧಿಕಾರಿ ಭರತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದು, ದಾವಣಗೆರೆ ನಗರದ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಖಾಸಗಿ ಲೇಔಟ್ ನಿರ್ಮಾಣಕ್ಕೆ ಶ್ರೀನಿವಾಸ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಪರವಾನಗಿ ನೀಡಲು ಮೂರು ಲಕ್ಷ ಲಂಚಕ್ಕೆ ಅಧಿಕಾರಿಗಳಿಬ್ಬರು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣವನ್ನು ಪಡೆದಿದ್ದರು.
ನಂತರ ಶ್ರೀನಿವಾಸ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅಂತೆಯೇ ಬಾಕಿ 2 ಲಕ್ಷ ಹಣ ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದಂತ ಕೆ.ಆರ್ ಮಂಜು ಹಾಗೂ ಭರತ್ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.